ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಹಾಗೂ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅಭಿನಯದ ಕೊನೆಯ ಸಿನಿಮಾ ‘ಜನ ನಾಯಗನ್’ ಜುಲೈ 23ರಂದು ವಿಶ್ವದಾದ್ಯಂತ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಆರಂಭ ಪಡೆದಿದೆ. ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದರೂ, ಪ್ರೇಕ್ಷಕರಿಂದ ಉತ್ತಮ ಬೆಂಬಲ ಸಿಕ್ಕಿದ್ದು, ಮೊದಲ ದಿನವೇ ವಿಶ್ವದಾದ್ಯಂತ 78.27 ಕೋಟಿ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ.
ಭಾರತದಲ್ಲಿ ಚಿತ್ರವು ಮೊದಲ ದಿನ 48.27 ಕೋಟಿ ಗಳಿಸಿದೆ. ವಿದೇಶಗಳಲ್ಲಿ 30 ಕೋಟಿ ಸಂಗ್ರಹವಾಗಿದ್ದು, ಒಟ್ಟಾರೆ ಮೊದಲ ದಿನದ ವಿಶ್ವವ್ಯಾಪಿ ಕಲೆಕ್ಷನ್ 78.27 ಕೋಟಿ ತಲುಪಿದೆ.
ತಮಿಳು ಭಾಷೆಯಲ್ಲಿ ಚಿತ್ರವು ಮೊದಲ ದಿನ 68.31% ಥಿಯೇಟರ್ ಆಕ್ಯುಪೆನ್ಸಿ ದಾಖಲಿಸಿದೆ. ಬೆಳಗಿನ ಶೋಗಳಿಗೆ 73.85%, ಮಧ್ಯಾಹ್ನ 62.46%, ಸಂಜೆ 63.62% ಹಾಗೂ ರಾತ್ರಿ ಪ್ರದರ್ಶನಗಳಿಗೆ 73.31% ಪ್ರೇಕ್ಷಕರ ಹಾಜರಾತಿ ಕಂಡುಬಂದಿದೆ.
‘ಲಿಯೋ’ವನ್ನು ಹಿಂದಿಕ್ಕಿದ ಜನ ನಾಯಗನ್
ಸುಮಾರು 300 ಕೋಟಿಗೂ ಅಧಿಕ ಬಜೆಟ್ನಲ್ಲಿ ನಿರ್ಮಾಣವಾಗಿರುವ ‘ಜನ ನಾಯಗನ್’, ವಿಜಯ್ ಅವರ ಹಿಂದಿನ ಸೂಪರ್ಹಿಟ್ ಚಿತ್ರಗಳಾದ ‘ಲಿಯೋ’ (75.53 ಕೋಟಿ) ಮತ್ತು ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ (51.39 ಕೋಟಿ) ಮೊದಲ ದಿನದ ಗಳಿಕೆಯನ್ನು ಹಿಂದಿಕ್ಕಿದೆ.
ಇದನ್ನೂ ಓದಿ:
ಚಿತ್ರಕ್ಕೆ ವಿಮರ್ಶಕರಿಂದ ಮಿಶ್ರ ಅಭಿಪ್ರಾಯ ವ್ಯಕ್ತವಾಗಿದ್ದರೂ, ವಿಜಯ್ ಅವರ ಮಾಸ್ ಎಂಟ್ರಿ, ಆಕ್ಷನ್ ದೃಶ್ಯಗಳು ಮತ್ತು ಹಿನ್ನೆಲೆ ಸಂಗೀತಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ವಿಜಯ್ ಅವರ ಎಲಿವೇಷನ್ ದೃಶ್ಯಗಳು ಚಿತ್ರಕ್ಕೆ ಪ್ರಮುಖ ಆಕರ್ಷಣೆಯಾಗಿವೆ.
ಎಚ್. ವಿನೋತ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ಜೊತೆಗೆ ಮಮಿತಾ ಬೈಜು, ಬಾಬಿ ಡಿಯೋಲ್ ಹಾಗೂ ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದೆ.



