ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಸಬ್-ಜೂನಿಯರ್ ಪುರುಷರ ಹಾಕಿ ತಂಡವು ಅತ್ಯುನ್ನತ ಮತ್ತು ಶಿಸ್ತುಬದ್ಧ ಪ್ರದರ್ಶನ ನೀಡುವ ಮೂಲಕ FIH ಯೂತ್ ಹಾಕಿ5s ಏಷ್ಯನ್ ಚಾಂಪಿಯನ್ಶಿಪ್ನ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 3-1 ಗೋಲುಗಳ ಅಂತರದಿಂದ ಸೋಲಿಸಿ ಬಂಗಾರದ ಪದಕವನ್ನು ಮುಡಿಗೇರಿಸಿಕೊಂಡಿದೆ.
ರೋಮಿತ್ ಪಾಲ್, ನಾಯಕ ಕೇತನ್ ಕುಶ್ವಾಹ ಮತ್ತು ಶಾರುಖ್ ಅಲಿಯ ಭರ್ಜರಿ ಗೋಲುಗಳ ನೆರವಿನಿಂದ ಭಾರತವು ಏಷ್ಯನ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಐತಿಹಾಸಿಕ ಗೆಲುವಿನೊಂದಿಗೆ ಭಾರತ ತಂಡವು ಇಡೀ ಟೂರ್ನಮೆಂಟ್ನಲ್ಲಿ ಸೋಲನ್ನೇ ಕಾಣದ ದಿಗ್ವಿಜಯ ಸಾಧಿಸಿದ್ದು, ಎಲೈಟ್ ಪೂಲ್ ಪಟ್ಟಿಯಲ್ಲೂ ಅಗ್ರಸ್ಥಾನ ಕಾಯ್ದುಕೊಂಡಿದೆ.
ಪಂದ್ಯದ ರೋಚಕ ವಿವರ
ಫೈನಲ್ ಪಂದ್ಯದ ಆರಂಭದಿಂದಲೇ ಭಾರತೀಯ ಆಟಗಾರರು ಚುರುಕಿನ ಪಾಸಿಂಗ್ ಮತ್ತು ಬಲಿಷ್ಠ ಆಟದ ಮೂಲಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಪಂದ್ಯದ 5ನೇ ನಿಮಿಷದಲ್ಲಿಯೇ ರೋಮಿತ್ ಪಾಲ್ ಪಾಕಿಸ್ತಾನದ ಗೋಲ್ಕೀಪರ್ ಸವಾಲನ್ನು ಮೆಟ್ಟಿ ನಿಂತು ಮೊದಲ ಗೋಲು ಬಾರಿಸಿದರು. ಇದರಿಂದಾಗಿ ಭಾರತ ಮೊದಲಾರ್ಧದ ಮುಕ್ತಾಯಕ್ಕೆ 1-0 ಮುನ್ನಡೆ ಸಾಧಿಸಿತು.
ದ್ವಿತೀಯಾರ್ಧದ ಆರಂಭದಲ್ಲೂ ಭಾರತ ತನ್ನ ಆಕ್ರಮಣಕಾರಿ ಆಟವನ್ನು ಮುಂದುವರಿಸಿತು. 12ನೇ ನಿಮಿಷದಲ್ಲಿ ನಾಯಕ ಕೇತನ್ ಕುಶ್ವಾಹ ಭರ್ಜರಿ ಗೋಲು ಹೊಡೆದರೆ, ಅದರ ಬೆನ್ನಲ್ಲೇ 13ನೇ ನಿಮಿಷದಲ್ಲಿ ಶಾರುಖ್ ಅಲಿ ಮತ್ತೊಂದು ಗೋಲು ಬಾರಿಸುವ ಮೂಲಕ ಭಾರತದ ಮುನ್ನಡೆಯನ್ನು 3-0ಗೆ ಹೆಚ್ಚಿಸಿದರು. ಪಂದ್ಯದ 16ನೇ ನಿಮಿಷದಲ್ಲಿ ಪಾಕಿಸ್ತಾನದ ಮೊಹಮ್ಮದ್ ಉಸ್ಮಾನ್ ಒಂದು ಗೋಲು ಗಳಿಸಿ ಅಂತರವನ್ನು ಕಡಿಮೆ ಮಾಡಲು ಯತ್ನಿಸಿದರಾದರೂ, ಪಂದ್ಯದ ಕೊನೆಯ ನಿಮಿಷಗಳಲ್ಲಿ ಭಾರತದ ಬಲಿಷ್ಠ ರಕ್ಷಣಾತ್ಮಕ ಆಟಗಾರರು ಪಾಕ್ ಪಡೆಗೆ ಯಾವುದೇ ಅವಕಾಶ ನೀಡದೆ 3-1 ಅಂತರದ ಭರ್ಜರಿ ವಿಜಯವನ್ನು ಖಚಿತಪಡಿಸಿದರು.
ಇದನ್ನೂ ಓದಿ:
ವಿಶ್ವಕಪ್ಗೆ ಅಧಿಕೃತ ಅರ್ಹತೆ
ಫೈನಲ್ ತಲುಪಿದ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಮುಂಬರುವ ಚೊಚ್ಚಲ ‘FIH ಯೂತ್ ಹಾಕಿ5s ವಿಶ್ವಕಪ್’ಗೆ ಅಧಿಕೃತವಾಗಿ ಅರ್ಹತೆ ಪಡೆದುಕೊಂಡಿವೆ.
ಮಹಿಳಾ ತಂಡಕ್ಕೆ ಬೆಳ್ಳಿಯ ಗರಿ
ಮತ್ತೊಂದೆಡೆ, ಮಹಿಳೆಯರ ವಿಭಾಗದ ಫೈನಲ್ನಲ್ಲಿ ಚೀನಾ ವಿರುದ್ಧ ತೀವ್ರ ಹೋರಾಟ ನಡೆಸಿದ ಭಾರತದ ಸಬ್-ಜೂನಿಯರ್ ಮಹಿಳಾ ತಂಡವು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದೆ. ಇದರೊಂದಿಗೆ ಭಾರತದ ಪುರುಷರ ಮತ್ತು ಮಹಿಳೆಯರ ಎರಡೂ ತಂಡಗಳು ಪದಕಗಳೊಂದಿಗೆ ತಾಯ್ನಾಡಿಗೆ ಮರಳುತ್ತಿರುವುದು ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ.



