ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಐವಿ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ. ಯುವ ಜನರಲ್ಲಿ ಹೆಚ್ಐವಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ, ಆರಂಭಿಕ ಹಂತದಲ್ಲೇ ಸೋಂಕು ಪತ್ತೆಹಚ್ಚಿ, ಕಡಿವಾಣ ಹಾಕಲು ಈ ರೀತಿ ಮಾಡಲಾಗಿದೆ
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಹಾಗೂ ಇತರ ಸಂಸ್ಥೆಗಳ ವರದಿಗಳ ಪ್ರಕಾರ, ಹೆಚ್ಐವಿ ಸೋಂಕಿತರ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ 3ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸುಮಾರು 2.60 ಲಕ್ಷ ಮಂದಿ ಹೆಚ್ಐವಿ ಸೋಂಕಿನೊಂದಿಗೆ ಬದುಕುತ್ತಿದ್ದು, ಅವರಲ್ಲಿ ಸುಮಾರು 2.05 ಲಕ್ಷ ಮಂದಿ ಆಂಟಿ ರೆಟ್ರೋ ವೈರಲ್ ಥೆರಪಿ ಪಡೆಯುತ್ತಿದ್ದಾರೆ.
ಇನ್ನೂ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ವಿಶೇಷವಾಗಿ 18 ರಿಂದ 35 ವರ್ಷದ ಯುವ ಸಮೂಹದಲ್ಲಿ ಸೋಂಕು ವೇಗವಾಗಿ ಹರಡುತ್ತಿರುವುದು ಇಲಾಖೆಯ ಆತಂಕಕ್ಕೆ ಕಾರಣವಾಗಿದೆ. ಇದೇ ವಯೋಮಾನದೊಳಗಿನ 18 ರಿಂದ 25 ವರ್ಷದ ಸುಮಾರು 7 ಸಾವಿರ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ರಾಜ್ಯದಲ್ಲಿ ಸುಮಾರು 54 ಸಾವಿರ ಮಂದಿಗೆ ತಮಗೆ ಸೋಂಕು ಇರುವುದೇ ತಿಳಿದಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.



