ಹೊಸದಿಗಂತ ಡಿಜಿಟಲ್ ಡೆಸ್ಕ್;
ಬೆಂಗಳೂರಿನ ಸೌಂದರ್ಯಕ್ಕೆ ಕಂಟಕವಾಗಿರುವ ಕಸದ ಸಮಸ್ಯೆಗೆ ಶಾಶ್ವತ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಸಜ್ಜಾಗಿದೆ. ‘ಆಪರೇಷನ್ ಫುಟ್‌ಪಾತ್’ ಯಶಸ್ಸಿನ ಬೆನ್ನಲ್ಲೇ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಈಗ ‘ಆಪರೇಷನ್ ಜೆಸಿಬಿ’ ಅಂದರೆ ‘ಜಸ್ಟ್ ಕ್ಲೀನ್ ಬೆಂಗಳೂರು’ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ. ಆಗಸ್ಟ್ 1 ರಿಂದ ನಗರದಾದ್ಯಂತ ಹಮ್ಮಿಕೊಳ್ಳಲಾಗುತ್ತಿರುವ “ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನ”ದ ಪೂರ್ವಸಿದ್ಧತೆಗಾಗಿ ಸಚಿವರು ಇಂದು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಉನ್ನತ ಮಟ್ಟದ ಜಂಟಿ ಸಭೆ ನಡೆಸಿದರು.
1,600 ಕಡೆ ಬಿದ್ದಿದೆ 22 ಸಾವಿರ ಟನ್ ಕಸ!
ಬೆಂಗಳೂರು ನಗರದಾದ್ಯಂತ ಸದ್ಯ ಗುರುತಿಸಲಾಗಿರುವ ಒಟ್ಟು 1,600 ಬ್ಲಾಕ್ ಸ್ಪಾಟ್‌ಗಳಲ್ಲಿ ಸುಮಾರು 22 ಸಾವಿರ ಟನ್ ನಿರಂತರ ತ್ಯಾಜ್ಯ ಹಾಗೂ ಕಟ್ಟಡ ಅವಶೇಷಗಳು ಬಿದ್ದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇವೆಲ್ಲವನ್ನೂ ವಿಲೇವಾರಿ ಮಾಡಿ ಮುಂದಿನ ಆಗಸ್ಟ್ ತಿಂಗಳು ಪೂರ್ತಿ ನಗರವನ್ನು ಸಂಪೂರ್ಣ ಕಸ ಮುಕ್ತ ಮಾಡಲು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇನ್ಮುಂದೆ ಕಸ ವಿಲೇವಾರಿ ಮಾಡುವ ಮತ್ತು ಕಟ್ಟಡ ಅವಶೇಷಗಳನ್ನು ಸಾಗಿಸುವ ಎಲ್ಲಾ ವಾಹನಗಳಲ್ಲಿ ಜಿಪಿಎಸ್ (GPS) ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ನೋಂದಣಿಯಾಗದ ಯಾವುದೇ ಖಾಸಗಿ ವಾಹನಗಳಲ್ಲಿ ತ್ಯಾಜ್ಯ ಸಾಗಿಸುವಂತಿಲ್ಲ ಹಾಗೂ ಸರ್ಕಾರ ಗುರುತಿಸಿರುವ ನಿಗದಿತ ಜಾಗದಲ್ಲಿ ಮಾತ್ರ ಕಸ ಹಾಕಬೇಕು ಎಂದು ಸಚಿವರು ಆದೇಶಿಸಿದ್ದಾರೆ.
ಖಾಸಗಿ ನಿವೇಶನ ಮಾಲೀಕರಿಗೆ ದಂಡಾಸ್ತ್ರ:
ಬೆಂಗಳೂರಿನಲ್ಲಿ ಖಾಲಿ ಬಿದ್ದಿರುವ ಖಾಸಗಿ ನಿವೇಶನಗಳಲ್ಲಿ ಕಸ ತುಂಬಿಕೊಳ್ಳುತ್ತಿರುವುದಕ್ಕೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನಿವೇಶನಗಳ ಮಾಲೀಕರು ತಮ್ಮ ಜಾಗವನ್ನು ತಾವೇ ಸ್ವಚ್ಛವಾಗಿಟ್ಟುಕೊಳ್ಳಬೇಕು, ಇಲ್ಲದಿದ್ದರೆ ಜಿಬಿಎ ವತಿಯಿಂದ ಭಾರಿ ಮೊತ್ತದ ದಂಡಾಸ್ತ್ರ ಪ್ರಯೋಗಿಸಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:
ಸಭೆಯಲ್ಲಿ ಭಾಗವಹಿಸಿದ ಹಿರಿಯ ಅಧಿಕಾರಿಗಳ ದಂಡು:
ಬೆಂಗಳೂರನ್ನು ತ್ಯಾಜ್ಯ ಮುಕ್ತ ಮಾಡಲು ಎಲ್ಲಾ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಬೇಕಿರುವುದರಿಂದ ಈ ಸಮನ್ವಯ ಸಭೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಜಲಮಂಡಳಿ ಅಧ್ಯಕ್ಷೆ ಮಂಜುಳಾ, ವಿಶೇಷ ಆಯುಕ್ತ ನಿತೀಶ್ ಸೇರಿದಂತೆ ಬೆಸ್ಕಾಂ, ಸಂಚಾರ ಪೊಲೀಸ್, ರೈಲ್ವೆ, ಕೆ-ರೈಡ್, ಬಿಡಿಎ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಒ ಕರೀಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.



