August 1, 2026
Saturday, August 1, 2026
spot_img

ಕಾಮನ್‌ವೆಲ್ತ್ ಗೇಮ್ಸ್ 2026: ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಡಬಲ್ ಧಮಾಕಾ; ನೀರಜ್‌ಗೆ ಬೆಳ್ಳಿ, ಯಶ್‌ವೀರ್‌ಗೆ ಕಂಚು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತದ ಹೆಮ್ಮೆಯ ಜಾವೆಲಿನ್ ಥ್ರೋ ತಾರೆ, ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮತ್ತೊಂದು ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಗ್ಲ್ಯಾಸ್ಗೋದಲ್ಲಿ ನಡೆದ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ 85.83 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಶ್ರೀಲಂಕಾದ ರುಮೇಶ್ ತರಂಗ ಪತಿರಾಗೆ (89.75 ಮೀ) ಚಿನ್ನದ ಪದಕ ಗೆದ್ದರೆ, ಭಾರತದ ಮತ್ತೊಬ್ಬ ಯುವ ಆಟಗಾರ ಯಶ್‌ವೀರ್ ಸಿಂಗ್ ಕಂಚಿನ ಪದಕ ಜಯಿಸಿದ್ದಾರೆ.‌

ಒಂದೇ ವೇದಿಕೆಯಲ್ಲಿ ಇಬ್ಬರು ಭಾರತೀಯರು:

ಪದಕ ಗೆದ್ದ ನಂತರ ಮಾತನಾಡಿದ ನೀರಜ್ ಚೋಪ್ರಾ, “ಬೆಳ್ಳಿ ಪದಕ ಗೆದ್ದಿರುವುದಕ್ಕಿಂತಲೂ ಸಹ ಆಟಗಾರ ಯಶ್‌ವೀರ್ ಸಿಂಗ್‌ರೊಂದಿಗೆ ವೇದಿಕೆಯನ್ನು ಹಂಚಿಕೊಂಡಿರುವುದು ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ. ಇದು ನನಗೆ ಏಷ್ಯನ್ ಗೇಮ್ಸ್‌ನಲ್ಲಿ ಸೌರವ್ ಮತ್ತು ನಾನು ಒಟ್ಟಿಗೆ ಪದಕ ಗೆದ್ದ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ಕಠಿಣ ಪರಿಸ್ಥಿತಿಯಲ್ಲೂ ಯಶ್‌ವೀರ್ ತನ್ನ ಅತ್ಯುತ್ತಮ ಪ್ರದರ್ಶನ ನೀಡಿರುವುದು ಹೆಮ್ಮೆಯ ವಿಷಯ” ಎಂದು ಶ್ಲಾಘಿಸಿದ್ದಾರೆ. ನೀರಜ್ ಚೋಪ್ರಾ ಈ ಹಿಂದೆ 2018ರ ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಇದನ್ನೂ ಓದಿ:

ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಯಶ್‌ವೀರ್ ಸಿಂಗ್:

24 ವರ್ಷದ ಯುವ ಆಟಗಾರ ಯಶ್‌ವೀರ್ ಸಿಂಗ್ ತಮ್ಮ ಚೊಚ್ಚಲ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೇ ಅದ್ಭುತ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಆರನೇ ಹಾಗೂ ಅಂತಿಮ ಪ್ರಯತ್ನದಲ್ಲಿ 85.41 ಮೀಟರ್ ದೂರ ಎಸೆಯುವ ಮೂಲಕ ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ದಾಖಲಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಆಂಡರ್ಸನ್ ಪೀಟರ್ಸ್ ಮತ್ತು ಅರ್ಷದ್ ನದೀಮ್‌ರಂತಹ ವಿಶ್ವದ ಹೆಸರಾಂತ ಆಟಗಾರರನ್ನು ಹಿಂದಿಕ್ಕಿ ಯಶ್‌ವೀರ್ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !