August 2, 2026
Sunday, August 2, 2026
spot_img

ನಿಮ್ಮ ಕ್ಯಾಸ್ಟ್ ಸರ್ಟಿಫಿಕೇಟ್ ಇನ್ಮುಂದೆ ಉಚಿತ! ಕಂದಾಯ ಇಲಾಖೆಯಿಂದ ಬೃಹತ್ ಅಭಿಯಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯ ವಿಶೇಷ ಸಾಂದ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಾಗರಿಕರು ಸುಲಭವಾಗಿ ಪಾಲ್ಗೊಳ್ಳಲು ಕರ್ನಾಟಕ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಬರೋಬ್ಬರಿ 4.8 ಕೋಟಿಗೂ ಅಧಿಕ ಉಚಿತ ಜಾತಿ ಪ್ರಮಾಣಪತ್ರಗಳನ್ನು ವಿತರಿಸಲು ಕಂದಾಯ ಇಲಾಖೆ ಬೃಹತ್ ಯೋಜನೆ ರೂಪಿಸಿದೆ.

ಜಿಲ್ಲಾಧಿಕಾರಿಗಳಿಗೆ ಆಯುಕ್ತರ ಕಟ್ಟುನಿಟ್ಟಿನ ಸೂಚನೆ

ಈ ಅಭಿಯಾನವನ್ನು ವೇಗವಾಗಿ ಪೂರ್ಣಗೊಳಿಸಲು ಕಂದಾಯ ಆಯುಕ್ತರಾದ ಮೀನಾ ನಾಗರಾಜ್ ಸಿ.ಎನ್. ಅವರು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಕಳುಹಿಸಿದ್ದಾರೆ. ‘ಅಟಲ್ ಜಿ ಜನಸ್ನೇಹಿ ನಿರ್ದೇಶನಾಲಯ’ದಲ್ಲಿ ಲಭ್ಯವಿರುವ ಪ್ರಮಾಣಪತ್ರಗಳ ಪಿಡಿಎಫ್‌ಗಳನ್ನು (PDF) ಜಿಲ್ಲೆ, ತಾಲೂಕು ಮತ್ತು ಗ್ರಾಮವಾರು ವಿಂಗಡಿಸಿ ನೀಡಲಾಗುವುದು. ಸ್ಥಳೀಯ ಸಂಸ್ಥೆಗಳ ಮೂಲಕ ಗರಿಷ್ಠ ₹2.25 ವೆಚ್ಚದಲ್ಲಿ ಇವುಗಳನ್ನು ಮುದ್ರಿಸಿ ಜನರಿಗೆ ತಲುಪಿಸಲಾಗುತ್ತದೆ.

ಮೊಬೈಲ್‌ನಲ್ಲೇ ಲಿಂಕ್, ಆ್ಯಪ್ ಮೂಲಕ ವಿತರಣೆ

ಅರ್ಹ ಫಲಾನುಭವಿಗಳಿಗೆ ಎಸ್‌ಎಂಎಸ್ ಹಾಗೂ ವಾಟ್ಸಾಪ್ ಮೂಲಕ ಪ್ರಮಾಣಪತ್ರ ಡೌನ್‌ಲೋಡ್ ಮಾಡುವ ಲಿಂಕ್ ಬರಲಿದೆ. ಪಾರದರ್ಶಕತೆಗಾಗಿ ವಿಶೇಷ ಮೊಬೈಲ್ ಆ್ಯಪ್ ರೂಪಿಸಲಾಗಿದ್ದು, ಅಧಿಕಾರಿಗಳು ಮನೆಗೆ ಬಂದಾಗ ಆಧಾರ್ ಅಥವಾ ಮೊಬೈಲ್ ಒಟಿಪಿ (OTP) ಪಡೆದು ದಾಖಲೆ ಹಸ್ತಾಂತರಿಸಲಿದ್ದಾರೆ.

ಮುಖ್ಯಮಂತ್ರಿಗಳ ಸಂದೇಶ ಮತ್ತು ಅಗತ್ಯ ದಾಖಲೆಗಳ ವಿವರ

ಮತದಾರರ ಪಟ್ಟಿ ಪರಿಷ್ಕರಣೆಗೆ ಆಯೋಗ ಅಂಗೀಕರಿಸಿರುವ 11 ಪ್ರಮುಖ ದಾಖಲೆಗಳಲ್ಲಿ ಜಾತಿ ಪ್ರಮಾಣಪತ್ರವೂ ಒಂದಾಗಿದೆ. ಈ ಪ್ರಮಾಣಪತ್ರದ ಜೊತೆಗೆ ಮುಖ್ಯಮಂತ್ರಿಗಳ ಜಾಗೃತಿ ಸಂದೇಶ ಹಾಗೂ ಹಿಂಭಾಗದಲ್ಲಿ SIR ಪ್ರಕ್ರಿಯೆಗೆ ಬೇಕಾಗುವ ಅಗತ್ಯ ದಾಖಲೆಗಳ ಪಟ್ಟಿಯನ್ನು ಬಣ್ಣದ ಪ್ರಿಂಟ್‌ನಲ್ಲಿ ಮುದ್ರಿಸಿ ನೀಡಲಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !