ಹೊಸದಿಗಂತ ವರದಿ ಬೆಳಗಾವಿ :
ಬೆಳಗಾವಿ ಜಿಲ್ಲೆಯಲ್ಲಿ ಒಂದೆಡೆ ಬರದ ಛಾಯೆಯಿದ್ದರೆ, ಇನ್ನೊಂದೆಡೆ ನಿರಂತರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ಕೃಷ್ಣಾ ನದಿಯ ನೀರಿನ ಮಟ್ಟ ದಿಢೀರ್ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಜಮಖಂಡಿ-ಮೀರಜ್ ರಾಜ್ಯ ಹೆದ್ದಾರಿಯಲ್ಲಿರುವ ಪ್ರಮುಖ ಕುಡಚಿ-ಉಗಾರಖುರ್ದ್ ಸಂಪರ್ಕ ಸೇತುವೆ ಭಾನುವಾರ ಮತ್ತೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಇದರಿಂದಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
2ನೇ ಬಾರಿಗೆ ಪ್ರವಾಹಕ್ಕೆ ಸಿಲುಕಿದ ಸೇತುವೆ:
ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಹಾಗೂ ಮಹಾರಾಷ್ಟ್ರದ ಉಗಾರಖುರ್ದ್ ನಡುವೆ ಇರುವ ಈ ಸೇತುವೆಯು ಪ್ರಸಕ್ತ ವರ್ಷದಲ್ಲಿ ಪ್ರವಾಹದ ನೀರಿನಲ್ಲಿ ಮುಳುಗಡೆಯಾಗುತ್ತಿರುವುದು ಇದೇ ಎರಡನೇ ಬಾರಿಯಾಗಿದೆ. ಅಷ್ಟೇ ಅಲ್ಲದೆ, ಚಿಕ್ಕೋಡಿ ಉಪವಿಭಾಗದ ವ್ಯಾಪ್ತಿಯಲ್ಲಿ ಈ ವರ್ಷ ಜಲಾವೃತಗೊಂಡ 8ನೇ ಸೇತುವೆ ಇದಾಗಿದೆ.
ಸವಾರರಿಗೆ ಪರದಾಟ:
ಈ ಸೇತುವೆಯು ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ನಡುವಿನ ಪ್ರಮುಖ ವಾಣಿಜ್ಯ ಮತ್ತು ಪ್ರಯಾಣದ ಕೊಂಡಿಯಾಗಿದೆ. ಪ್ರತಿದಿನ ನೂರಾರು ಲಾರಿಗಳು, ಬಸ್ಗಳು ಹಾಗೂ ಖಾಸಗಿ ವಾಹನಗಳು ಈ ಮಾರ್ಗದಲ್ಲಿ ಚಲಿಸುತ್ತಿದ್ದವು. ಇದೀಗ ಸೇತುವೆ ಮುಳುಗಡೆಯಾಗಿರುವುದರಿಂದ ವಾಹನ ಸವಾರರು ಸುಮಾರು 50 ಕಿಲೋಮೀಟರ್ ಹೆಚ್ಚುವರಿ ಸುತ್ತುವರೆದು ಪರ್ಯಾಯ ಮಾರ್ಗಗಳ ಮೂಲಕ ತಲುಪಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ:
ಮುನ್ನೆಚ್ಚರಿಕಾ ಕ್ರಮ ಹಾಗೂ ಪೋಲಿಸ್ ಬಂದೋಬಸ್ತ್:
ಯಾವುದೇ ರೀತಿಯ ಅಪಾಯ ಅಥವಾ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ, ಬ್ಯಾರಿಕೇಡ್ ಅಳವಡಿಕೆ ಮಾಡಿರುವ ಕುಡಚಿ ಪೊಲೀಸರು ಸೇತುವೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಸಂಪೂರ್ಣ ಬಂದೋಬಸ್ತ್ ಮಾಡಿದ್ದಾರೆ.
ಸಂಚಾರ ನಿಷೇಧ:
ಸಾರ್ವಜನಿಕರು ಹಾಗೂ ವಾಹನಗಳು ಸೇತುವೆ ಬಳಿ ತೆರಳದಂತೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಜಿಲ್ಲಾಡಳಿತದ ಸ್ಪಷ್ಟನೆ:
ಪ್ರವಾಹ ಪರಿಸ್ಥಿತಿಯನ್ನು ಅಧಿಕಾರಿಗಳ ತಂಡ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ನದಿಯಲ್ಲಿ ನೀರಿನ ಮಟ್ಟ ತಗ್ಗಿ, ಸುರಕ್ಷತೆ ಖಚಿತವಾದ ನಂತರವಷ್ಟೇ ಹೆದ್ದಾರಿ ಸಂಚಾರಕ್ಕೆ ಮರು ಚಾಲನೆ ನೀಡಲಾಗುವುದು ಎಂದು ಜಿಲ್ಲಾಡಳಿತ ಸ್ಪಷ್ಟಣೆ ನೀಡಿದೆ.



