ಹೊಸದಿಗಂತ ಡಿಜಿಟಲ್ ಡೆಸ್ಕ್:
ನೆರೆಯ ರಾಷ್ಟ್ರ ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹ ಮತ್ತು ಭೂಕುಸಿತವು ಇಡೀ ದೇಶವನ್ನೇ ತತ್ತರಿಸುವಂತೆ ಮಾಡಿದೆ. ನೇಪಾಳದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDRRMA) ಗುರುವಾರ ಬಿಡುಗಡೆ ಮಾಡಿರುವ ಅಧಿಕೃತ ವರದಿಯ ಪ್ರಕಾರ, ಈ ಭೀಕರ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 1,410ಕ್ಕೆ ಏರಿಕೆಯಾಗಿದೆ. ಇನ್ನೂ 6,145 ಜನ ನಾಪತ್ತೆಯಾಗಿದ್ದು, ಅವರಿಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ.
ಮೃತರ ಗುರುತಿಸಲು ಡಿಎನ್‌ಎ ಪರೀಕ್ಷೆ
ಪ್ರವಾಹದ ತೀವ್ರತೆ ಎಷ್ಟಿದೆ ಎಂದರೆ, ಸಿಕ್ಕಿರುವ ಮೃತದೇಹಗಳಲ್ಲಿ 525 ಮೃತದೇಹಗಳು ಯಾರದ್ದು ಎಂದೇ ಗುರುತಿಸಲು ಸಾಧ್ಯವಾಗದಷ್ಟು ಹಾನಿಗೊಳಗಾಗಿವೆ. ಇವುಗಳನ್ನು ಪತ್ತೆಹಚ್ಚಲು ಸದ್ಯ 1,286 ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲಾಗಿದೆ ಹಾಗೂ ಅವರ ಸಂಬಂಧಿಕರ 1,944 ಮಾದರಿಗಳೊಂದಿಗೆ ಹೋಲಿಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ನಾಪತ್ತೆಯಾದವರಲ್ಲಿ 587 ವಿದೇಶಿ ಪ್ರಜೆಗಳೂ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿತ್ವಾನ್ ಜಿಲ್ಲೆಯಲ್ಲೇ ಅತಿ ಹೆಚ್ಚು ಅಂದರೆ 364 ಜನರು ಮೃತಪಟ್ಟಿದ್ದು, ನವಲಪರಾಸಿ ಮತ್ತು ನುವಾಕೋಟ್ ಜಿಲ್ಲೆಗಳು ಪ್ರವಾಹಕ್ಕೆ ಸಂಪೂರ್ಣ ತತ್ತರಿಸಿಹೋಗಿವೆ.
ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯ
ನೇಪಾಳ ಸೇನೆ ಮತ್ತು ಸಶಸ್ತ್ರ ಪೊಲೀಸ್ ಪಡೆಗಳು ಜಂಟಿಯಾಗಿ ಹೆಲಿಕಾಪ್ಟರ್‌ಗಳ ಮೂಲಕ ಬೃಹತ್ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಇದುವರೆಗೆ 13,756 ಜನರನ್ನು ಪ್ರವಾಹ ಪೀಡಿತ ಪ್ರದೇಶಗಳಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ. ವಿವಿಧ ಆಸ್ಪತ್ರೆಗಳಲ್ಲಿ ನೂರಾರು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ 27 ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದ್ದು, ಸಾವಿರಾರು ಜನರಿಗೆ ಆಶ್ರಯ ನೀಡಲಾಗಿದೆ. ಸಂತ್ರಸ್ತರಿಗೆ ರಸ್ತೆ ಮತ್ತು ವಾಯು ಮಾರ್ಗದ ಮೂಲಕ ನಿರಂತರವಾಗಿ ಆಹಾರ ಹಾಗೂ ಅಗತ್ಯ ಸಾಮಗ್ರಿಗಳನ್ನು ನೀಡಲಾಗುತ್ತಿದೆ.
ಇದನ್ನೂ ಓದಿ:
ಸಂತ್ರಸ್ತ ಕುಟುಂಬಗಳಿಗೆ ನೆರವು
ಮನೆ ಕಳೆದುಕೊಂಡು ನಿರಾಶ್ರಿತರ ಕೇಂದ್ರಗಳಲ್ಲಿ ಇರಲು ಸಾಧ್ಯವಾಗದ ಕುಟುಂಬಗಳಿಗೆ ನೇಪಾಳ ಸರ್ಕಾರವು ಮುಂದಿನ ಆರು ತಿಂಗಳವರೆಗೆ ಪ್ರತಿ ತಿಂಗಳು ತಲಾ 15,000 ರೂ.ಆರ್ಥಿಕ ನೆರವು ಘೋಷಿಸಿದೆ. ಇದರ ನಡುವೆ, ನೇಪಾಳದ ಹಣಕಾಸು ಸಚಿವ ಸ್ವರ್ಣಿಮ್ ವಾಗ್ಲೆ ಅವರು ಗುರುವಾರ ದೆಹಲಿಗೆ ಭೇಟಿ ನೀಡಿದ್ದು, ಪ್ರವಾಹದ ನಂತರದ ಪುನರ್ನಿರ್ಮಾಣ ಕಾರ್ಯ ಹಾಗೂ ಭಾರತದಿಂದ ಪಡೆಯಬಹುದಾದ ಆರ್ಥಿಕ ಮತ್ತು ತಾಂತ್ರಿಕ ಸಹಕಾರದ ಕುರಿತು ಭಾರತ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಮಹತ್ವದ ಮಾತುಕತೆ ನಡೆಸುತ್ತಿದ್ದಾರೆ.



