October 9, 2026
Friday, October 9, 2026
spot_img

ಹಣಕ್ಕಾಗಿ ಕಿರುಕುಳ ನೀಡಿ ವಿವಾಹಿತೆಯ ಕೊ*ಲೆ?: ಪತಿ, ಅತ್ತೆ, ನಾದಿನಿ ವಿರುದ್ಧ ಪ್ರಕರಣ ದಾಖಲು

ಹೊಸದಿಗಂತ ವರದಿ ಯಾದಗಿರಿ:

ಮಗುವಿನ ಚಿಕಿತ್ಸೆಯ ನೆಪದಲ್ಲಿ ಹಣಕ್ಕಾಗಿ ನಿರಂತರ ಕಿರುಕುಳ ನೀಡಿ 24 ವರ್ಷದ ವಿವಾಹಿತೆಯನ್ನು ಕೊಲೆ ಮಾಡಿರುವ ಆರೋಪದಡಿ ಪತಿ, ಅತ್ತೆ ಹಾಗೂ ನಾದಿನಿ ವಿರುದ್ಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣಕ್ಕಾಗಿ ಕಿರುಕುಳ ಆರೋಪ

ಶಹಾಪುರ ನಿವಾಸಿ ರಜೀಯಾ ಬೇಗಂ ನೀಡಿದ ದೂರಿನ ಮೇರೆಗೆ ಲಾಡೇಜ್‌ಗಲ್ಲಿಯ ನಸೀರ್ ಸಾಬ್ ಖುರೇಷಿ, ಗೌಸೀಯಾ ಬೇಗಂ ಹಾಗೂ ನಸೀಮಾ ವಿರುದ್ಧ ಬಿಎನ್‌ಎಸ್‌ ಕಲಂ 85, 103(1) ಮತ್ತು 3(5)ರಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮಗುವಿನ ಚಿಕಿತ್ಸೆಯ ನೆಪದಲ್ಲಿ ಹಣದ ಬೇಡಿಕೆ

2020ರಲ್ಲಿ ನಫೀಸ್ ಬೇಗಂ ಅವರ ವಿವಾಹ ನಸೀರ್ ಸಾಬ್ ಅವರೊಂದಿಗೆ ನಡೆದಿತ್ತು. ದಂಪತಿಗೆ ಮೂರುವರೆ ವರ್ಷದ ಪುತ್ರನಿದ್ದು, ಮಗುವಿನ ಚಿಕಿತ್ಸೆಯ ನೆಪದಲ್ಲಿ ಆರೋಪಿಗಳು ಹಲವು ಬಾರಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿಂದೆ 3ರಿಂದ 4 ಲಕ್ಷ ರೂ. ಪಡೆದಿದ್ದರೂ, ಒಂದು ತಿಂಗಳ ಹಿಂದೆ ಮತ್ತೆ 1 ಲಕ್ಷ ರೂ. ತರಲು ಒತ್ತಾಯಿಸಿ, ಹಣ ನೀಡದ ಹಿನ್ನೆಲೆಯಲ್ಲಿ ನಫೀಸ್‌ಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ:

ಕುತ್ತಿಗೆಯಲ್ಲಿ ನೇಣಿನ ಗುರುತು ಪತ್ತೆ

ಆಗಸ್ಟ್‌ 2ರಂದು ರಾತ್ರಿ ನಫೀಸ್‌ಗೆ ಬಿಪಿ ಕಡಿಮೆಯಾಗಿದೆ ಎಂದು ಕುಟುಂಬಕ್ಕೆ ಮಾಹಿತಿ ನೀಡಲಾಗಿತ್ತು. ಮನೆಗೆ ತೆರಳಿದಾಗ ನಫೀಸ್ ಮೃತಪಟ್ಟಿದ್ದು, ಕುತ್ತಿಗೆಯಲ್ಲಿ ನೇಣಿನ ಗುರುತುಗಳು ಕಂಡುಬಂದಿವೆ ಎಂದು ಕುಟುಂಬಸ್ಥರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪೊಲೀಸ್ ತನಿಖೆ ಮುಂದುವರಿಕೆ

ಪ್ರಕರಣ ದಾಖಲಿಸಿಕೊಂಡಿರುವ ಯಾದಗಿರಿ ನಗರ ಠಾಣೆ ಪೊಲೀಸರು ಸಾವಿನ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.

Must Read