ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ನಕ್ಸಲ್ ಚಳವಳಿಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿರುವ ಕುಟ್ಟಿಯಾಡಿ ಪೊಲೀಸ್ ಠಾಣೆಯ ಹಳೆ ಕಟ್ಟಡ ಶೀಘ್ರದಲ್ಲೇ ಇತಿಹಾಸದ ಪುಟ ಸೇರಲಿದೆ.
1969ರ ಡಿ.18ರಂದು ನಡೆದ ನಕ್ಸಲ್ ದಾಳಿಗೆ ಸಾಕ್ಷಿಯಾಗಿದ್ದ ಈ ಕಟ್ಟಡ ಈಗ ಶಿಥಿಲಾವಸ್ಥೆ ತಲುಪಿರುವ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಅಂದು ಮುಂಜಾನೆ ಸುಮಾರು 15ಕ್ಕೂ ಹೆಚ್ಚು ಶಸ್ತ್ರಸಜ್ಜಿತ ನಕ್ಸಲರು ಈ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ್ದರು. ಕೊಡಲಿಗಳಿಂದ ಠಾಣೆಯ ಬಾಗಿಲು ಒಡೆದು, ಕಿಟಕಿಗಳ ಮೂಲಕ ದೇಶೀ ಬಾಂಬ್ ಎಸೆದು ದಾಳಿ ನಡೆಸಿದ್ದರು. ಈ ಘಟನೆ ಅಂದು ಕೇರಳದಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಘಟನೆಯಲ್ಲಿ ಕರ್ತವ್ಯದಲ್ಲಿದ್ದ ಸಬ್ಇನ್ಸ್ಪೆಕ್ಟರ್ ಗಾಯಗೊಂಡಿದ್ದರು. ಬಳಿಕ ನಡೆದ ಪ್ರತಿದಾಳಿಯಲ್ಲಿ ನಕ್ಸಲ್ ನಾಯಕ ಪೆರುವನ್ನಮೂಳಿ ವೇಲಾಯುಧನ್ ಮೃತಪಟ್ಟಿದ್ದು, ಉಳಿದ ಆರೋಪಿಗಳನ್ನು ನಂತರ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ:
ನಕ್ಸಲ್ ಚಳವಳಿಯ ಕಹಿ ನೆನಪುಗಳನ್ನು ಹೊತ್ತಿದ್ದ ಈ ಹಳೆಯ ಕಟ್ಟಡವನ್ನು ಹಲವು ವರ್ಷಗಳಿಂದ ಐತಿಹಾಸಿಕ ಸ್ಮಾರಕವಾಗಿ ಉಳಿಸಿಕೊಳ್ಳಲಾಗಿತ್ತು. ಆದರೆ ಕಟ್ಟಡ ತೀವ್ರ ಶಿಥಿಲಗೊಂಡು ಸಾರ್ವಜನಿಕರ ಸುರಕ್ಷತೆಗೆ ಅಪಾಯ ಉಂಟುಮಾಡುವ ಸ್ಥಿತಿಗೆ ತಲುಪಿರುವುದರಿಂದ ಅದನ್ನು ಸಂಪೂರ್ಣ ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದರೊಂದಿಗೆ ಮಲಬಾರ್ ಪ್ರದೇಶದ ‘ಕ್ರಾಂತಿಕಾರಿ’ ಇತಿಹಾಸಕ್ಕೆ ಸಾಕ್ಷಿಯಾಗಿದ್ದ ಮತ್ತೊಂದು ಕಟ್ಟಡ ಇತಿಹಾಸದ ಪುಟ ಸೇರಲಿದೆ.



