August 4, 2026
Tuesday, August 4, 2026
spot_img

ಬಂಟ್ವಾಳದಲ್ಲಿ ರೌದ್ರಾವತಾರ ತಗ್ಗಿಸಿ ಸಹಜ ಸ್ಥಿತಿಗೆ ಮರಳಿದ ನೇತ್ರಾವತಿ: ಆತಂಕದಲ್ಲಿದ್ದ ಆಲಡ್ಕ ಜನರಲ್ಲಿ ನಿಟ್ಟುಸಿರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಎರಡು ದಿನಗಳಿಂದ ಸುರಿದ ಭಾರೀ ಗಾಳಿ-ಮಳೆಯಿಂದ ಆರ್ಭಟಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ನೇತ್ರಾವತಿ, ಮಂಗಳವಾರ ಸಂಜೆಯ ವೇಳೆಗೆ ನಿಧಾನವಾಗಿ ಸಹಜ ಸ್ಥಿತಿಗೆ ಮರಳಿದ್ದು, ಪ್ರವಾಹ ಭೀತಿ ಎದುರಿಸುತ್ತಿದ್ದ ನದಿ ತೀರದ ನಿವಾಸಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

ಎರಡು ದಿನಗಳ ಕಾಲ ಸುಮಾರು 8.5 ಮೀಟರ್ ಮಟ್ಟದಲ್ಲಿ ಉಕ್ಕಿ ಹರಿದ ನೇತ್ರಾವತಿ, ಮಂಗಳವಾರ ಸಂಜೆ ವೇಳೆಗೆ 4.1 ಮೀಟರ್ ಮಟ್ಟಕ್ಕೆ ಇಳಿಕೆಯಾಗಿದೆ. ನೆರೆ ನೀರು ಇಳಿದಿದ್ದರೂ ಹಲವು ಪ್ರದೇಶಗಳಲ್ಲಿ ಪ್ರವಾಹದ ಹಾನಿಯ ಗುರುತುಗಳು ಇನ್ನೂ ಸ್ಪಷ್ಟವಾಗಿ ಕಾಣಿಸುತ್ತಿವೆ. ಭಾರೀ ಮಳೆಯ ಪರಿಣಾಮವಾಗಿ ನದಿ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿ ತೋಟ, ಗದ್ದೆ ಹಾಗೂ ಮನೆಗಳಿಗೆ ಹಾನಿ ಉಂಟುಮಾಡಿತ್ತು. ಪಾಣೆಮಂಗಳೂರಿನ ಆಲಡ್ಕ ಪ್ರದೇಶದ ಸುಮಾರು ಸುಮಾರು 15 ಮನೆಗಳಿಗೆ ನೆರೆ ನೀರು ನುಗ್ಗಿದ್ದರಿಂದ ಕುಟುಂಬಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು.

ಇದನ್ನೂ ಓದಿ:

ಮನೆಗಳಿಗೆ ಹಾನಿ

ಈ ನಡುವೆ ಗಾಳಿ-ಮಳೆಯ ಅಬ್ಬರಕ್ಕೆ ನರಿಕೊಂಬು ಗ್ರಾಮದ ಜನತಾಗ್ರಹದಲ್ಲಿ ದಿನೇಶ್ ಅವರ ಮನೆಯ ಆವರಣ ಗೋಡೆ ಕುಸಿದು ಭಾಗಶಃ ಹಾನಿಯಾಗಿದೆ. ಅದೇ ರೀತಿ ಬಿ. ಮೂಡ ಗ್ರಾಮದ ಗೂಡಿನ ಬಳಿ ಮೊಹಮ್ಮದ್ ಅವರ ಮನೆಯ ಹಿಂಭಾಗದ ಬರೆ ಜರಿದು ಮನೆಗೆ ಹಾನಿಯಾಗಿದ್ದು, ಅಪಾಯದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಮಳೆ ತಗ್ಗಿದರೂ, ಹಾನಿಗೊಳಗಾದ ಪ್ರದೇಶಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಜನರು ಇನ್ನೂ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !