ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಪೇರೆಂಟ್ಸ್ ಪ್ರೀತಿಯಿಂದ ಟಿಫಿನ್ ಬಾಕ್ಸ್ ತುಂಬಿಸಿ ಕಳಿಸ್ತಾರೆ. ಆದ್ರೆ ಆ ಡಬ್ಬಿಯಲ್ಲಿ ಹೊಟ್ಟೆ ತುಂಬಿಸುವ ಆಹಾರ ಮಾತ್ರ ಇದ್ಯಾ? ಅಥವಾ ದೇಹಕ್ಕೆ ಬೇಕಾದ ಪೌಷ್ಟಿಕಾಂಶವೂ ಇದ್ಯಾ? ಅನ್ನೋ ಪ್ರಶ್ನೆಯನ್ನ ಇಂದು ಒಂದು ವೈರಲ್ ವಿಡಿಯೋ ದೇಶದ ಮುಂದೆ ತೆರೆದಿಟ್ಟಿದೆ.
ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳ ಲಂಚ್ ಬಾಕ್ಸ್ ಪರಿಶೀಲಿಸಿದಾಗ ಕಂಡ ದೃಶ್ಯ ಕೇವಲ ಅವರನ್ನು ಮಾತ್ರವಲ್ಲ, ಸಾವಿರಾರು ಪೋಷಕರನ್ನೂ ಯೋಚಿಸುವಂತೆ ಮಾಡಿದೆ. ಮಕ್ಕಳ ಆರೋಗ್ಯ, ಆಹಾರ ಪದ್ಧತಿ ಮತ್ತು ಪೌಷ್ಟಿಕಾಂಶದ ಬಗ್ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದೆ.
ಟಿಫಿನ್ ಬಾಕ್ಸ್ನಲ್ಲಿ ಕಂಡ ಒಂದೇ ರೀತಿಯ ಆಹಾರ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಶಿಕ್ಷಕಿ ತರಗತಿಯ ಪ್ರತಿಯೊಬ್ಬ ವಿದ್ಯಾರ್ಥಿಯ ಲಂಚ್ ಬಾಕ್ಸ್ ತೆರೆಯುತ್ತಾರೆ. ಕೆಲ ಪುಟ್ಟ ಮಕ್ಕಳು ಸ್ವತಃ ಬಾಕ್ಸ್ ತೆರೆದು ಒಳಗಿರುವ ಆಹಾರವನ್ನು ನೋಡ್ತಾರೆ. ಆದರೆ ಬಹುತೇಕ ಎಲ್ಲಾ ಮಕ್ಕಳ ಟಿಫಿನ್ನಲ್ಲಿ ಆಲೂಗಡ್ಡೆಯಿಂದ ತಯಾರಿಸಿದ ಆಹಾರವೇ ಕಾಣಿಸ್ತಿದೆ. ಕೆಲವರ ಬಳಿ ಆಲೂ ಪಲ್ಯ, ಕೆಲವರ ಬಳಿ ಆಲೂ ಪರೋಟಾ, ಇನ್ನೂ ಕೆಲವರ ಬಳಿ ಆಲೂಗಡ್ಡೆ ಮಿಶ್ರಿತ ತರಕಾರಿ ಇತ್ತು. ಇದನ್ನು ಕಂಡ ಶಿಕ್ಷಕಿ ಆಶ್ಚರ್ಯ ವ್ಯಕ್ತಪಡಿಸಿ, “ಇಂದು ಎಲ್ಲರೂ ಆಲೂಗಡ್ಡೆಯನ್ನೇ ಯಾಕೆ ತಂದಿದ್ದೀರಿ?” ಎಂದು ಮಕ್ಕಳನ್ನು ಕೇಳಿದ್ದಾರೆ.
ವೈರಲ್ ವಿಡಿಯೋ ಎಬ್ಬಿಸಿದ ದೊಡ್ಡ ಚರ್ಚೆ
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಮಕ್ಕಳ ಆಹಾರದ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ. ಹಲವರು ಮಕ್ಕಳ ಟಿಫಿನ್ನಲ್ಲಿ ಪ್ರೋಟೀನ್ಯುಕ್ತ ಆಹಾರಗಳ ಕೊರತೆ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಬೆಳೆಯುವ ಮಕ್ಕಳಿಗೆ ಕೇವಲ ಹೊಟ್ಟೆ ತುಂಬುವ ಆಹಾರವಲ್ಲ, ಸಮತೋಲಿತ ಪೌಷ್ಟಿಕಾಂಶವೂ ಅಗತ್ಯ ಎಂದು ಆರೋಗ್ಯ ತಜ್ಞರು ಹಲವು ಬಾರಿ ಹೇಳಿರುವುದನ್ನು ನೆನಪಿಸಿದ್ದಾರೆ.
ಆರ್ಥಿಕ ಪರಿಸ್ಥಿತಿಯೂ ಪ್ರಮುಖ ಕಾರಣ
ಮತ್ತೊಂದೆಡೆ, ಅನೇಕರು ಪೋಷಕರನ್ನು ಟೀಕಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಪನೀರ್, ಸೋಯಾ, ಬೀನ್ಸ್, ಮೊಟ್ಟೆ ಅಥವಾ ಇತರ ಪ್ರೋಟೀನ್ಯುಕ್ತ ಆಹಾರಗಳು ಆಲೂಗಡ್ಡೆಗಿಂತ ದುಬಾರಿಯಾಗಿದ್ದು, ಪ್ರತಿದಿನ ಎಲ್ಲ ಕುಟುಂಬಗಳಿಗೂ ಅವುಗಳನ್ನು ಖರೀದಿಸುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕಡಿಮೆ ವೆಚ್ಚದಲ್ಲಿ ಹೊಟ್ಟೆ ತುಂಬಿಸುವ ಆಹಾರವಾಗಿ ಆಲೂಗಡ್ಡೆ ಅನೇಕ ಮನೆಗಳಲ್ಲಿ ಮೊದಲ ಆಯ್ಕೆಯಾಗುತ್ತದೆ ಎಂಬುದನ್ನು ನೆಟ್ಟಿಗರು ಒತ್ತಿ ಹೇಳಿದ್ದಾರೆ.
ಇದನ್ನೂ ಓದಿ:
ತಜ್ಞರ ಸಲಹೆ ಏನು?
ಪೌಷ್ಟಿಕ ತಜ್ಞರ ಪ್ರಕಾರ ಮಕ್ಕಳ ಬೆಳವಣಿಗೆಗೆ ಕಾರ್ಬೋಹೈಡ್ರೇಟ್, ಪ್ರೋಟೀನ್, ಉತ್ತಮ ಕೊಬ್ಬು, ವಿಟಮಿನ್ ಹಾಗೂ ಖನಿಜಾಂಶಗಳ ಸಮತೋಲಿತ ಪ್ರಮಾಣ ಅಗತ್ಯ. ಆಲೂಗಡ್ಡೆ ಸಂಪೂರ್ಣವಾಗಿ ತಪ್ಪಲ್ಲ. ಆದರೆ ಅದರ ಜೊತೆಗೆ ಬೇಳೆ, ಮೊಟ್ಟೆ, ಹಾಲು, ಮೊಸರು, ಕಡಲೆ, ಹುರಳಿ, ಸೋಯಾ ಅಥವಾ ಇತರ ಪ್ರೋಟೀನ್ಯುಕ್ತ ಆಹಾರಗಳನ್ನು ಸೇರಿಸಿದರೆ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಹೆಚ್ಚು ಸಹಕಾರಿಯಾಗುತ್ತದೆ.
ಪೋಷಕರಲ್ಲಿ ಅರಿವು ಹೆಚ್ಚಬೇಕಿದೆ
ಈ ವೈರಲ್ ವಿಡಿಯೋ ಕೇವಲ ಒಂದು ತರಗತಿಯ ಘಟನೆ ಅಲ್ಲ. ಮಕ್ಕಳ ಆಹಾರದಲ್ಲಿ ಪೌಷ್ಟಿಕಾಂಶದ ಬಗ್ಗೆ ಇನ್ನಷ್ಟು ಅರಿವು ಮೂಡಬೇಕಿರುವ ಅಗತ್ಯವನ್ನು ಇದು ನೆನಪಿಸಿದೆ. ಹೊಟ್ಟೆ ತುಂಬಿಸುವ ಆಹಾರ ಮಾತ್ರವಲ್ಲ, ಆರೋಗ್ಯಕರ ಭವಿಷ್ಯ ಕಟ್ಟುವ ಆಹಾರವನ್ನು ಮಕ್ಕಳಿಗೆ ನೀಡುವ ಹೊಣೆಗಾರಿಕೆ ಪ್ರತಿಯೊಬ್ಬ ಪೋಷಕರ ಮೇಲಿದೆ. ಸರಿಯಾದ ಆಹಾರ ಪದ್ಧತಿಯೇ ಆರೋಗ್ಯವಂತ ಸಮಾಜದ ಮೊದಲ ಹೆಜ್ಜೆ ಎಂಬ ಸಂದೇಶವನ್ನು ಈ ಘಟನೆ ಮತ್ತೊಮ್ಮೆ ಎಲ್ಲರಿಗೂ ನೆನಪಿಸಿದೆ.



