August 8, 2026
Saturday, August 8, 2026
spot_img

ಇಂಟರ್ವ್ಯೂನಲ್ಲಿ ವಿಚಿತ್ರ ಬೇಡಿಕೆ ಇಟ್ಟ Gen Z: ‘ನನಗೆ ಮಧ್ಯಾಹ್ನ 30 ನಿಮಿಷ ನಿದ್ದೆ ಬೇಕು’ ಎಂದಿದ್ದಕ್ಕೆ CEO ಮಾಡಿದ್ದೇನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉದ್ಯೋಗದ ಸಂದರ್ಶನದಲ್ಲಿ ಸಂಬಳ, ರಜೆ, ವರ್ಕ್ ಫ್ರಂ ಹೋಮ್ ಅಥವಾ ಕೆಲಸದ ಸಮಯದ ಬಗ್ಗೆ ಪ್ರಶ್ನಿಸೋದು ಸಾಮಾನ್ಯ. ಆದರೆ ಇಲ್ಲೊಬ್ಬ ಅಭ್ಯರ್ಥಿ ಕೇಳಿದ ಬೇಡಿಕೆ ಕೇಳಿ ಕಂಪನಿ ಮಾಲೀಕರೇ ಒಂದು ಕ್ಷಣ ಅಚ್ಚರಿಗೊಂಡಿದ್ದಾರೆ.

ಹೌದು! ‘ಕೆಲಸದ ನಡುವೆ ಪ್ರತಿದಿನ 30 ನಿಮಿಷ ನಿದ್ದೆ ಮಾಡಬೇಕು’ ಎಂದು ಅಭ್ಯರ್ಥಿಯೊಬ್ಬರು ನೇರವಾಗಿ ಹೇಳಿದ್ದು, ಈ ವಿಚಿತ್ರ ಬೇಡಿಕೆಯೇ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ಸಂದರ್ಶನದಲ್ಲೇ 30 ನಿಮಿಷ ನಿದ್ದೆಯ ಬೇಡಿಕೆ

ನೊಯ್ಡಾ ಮೂಲದ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ನಿತಿನ್ ವರ್ಮಾ ಅವರು ಲಿಂಕ್ಡ್‌ಇನ್‌ನಲ್ಲಿ ಈ ಅನುಭವವನ್ನು ಹಂಚಿಕೊಂಡಿದ್ದಾರೆ. Gen Z ಅಭ್ಯರ್ಥಿಯೊಬ್ಬರು ಸಂದರ್ಶನದ ವೇಳೆ ಮಧ್ಯಾಹ್ನ 30 ನಿಮಿಷಗಳ ನಿದ್ದೆಗೆ ಸಮಯ ಬೇಕು ಎಂದು ಕೇಳಿದ್ದಾಗಿ ಅವರು ತಿಳಿಸಿದ್ದಾರೆ.

ಅಭ್ಯರ್ಥಿ ಯಾವುದೇ ಮುಜುಗರವಿಲ್ಲದೆ, ತಮಾಷೆ ಕೂಡ ಮಾಡದೆ, ಸಂಬಳದ ಕುರಿತು ಮಾತುಕತೆ ನಡೆಸುವಷ್ಟೇ ಸಹಜವಾಗಿ ಈ ಬೇಡಿಕೆಯನ್ನು ಮುಂದಿಟ್ಟಿದ್ದರು ಎಂದು ವರ್ಮಾ ಹೇಳಿದ್ದಾರೆ.

ಮೊದಲು ಅಚ್ಚರಿಗೊಂಡ CEO

ಅಭ್ಯರ್ಥಿಯ ಮಾತು ಕೇಳಿದಾಗ ಸಂದರ್ಶನವನ್ನು ಅಲ್ಲಿಗೇ ಮುಗಿಸಬೇಕು ಎಂದು ಮೊದಲಿಗೆ ಅನಿಸಿತ್ತು. ಆದರೆ ಬದಲಾಗಿ ವರ್ಮಾ ನಕ್ಕು ಮಾತುಕತೆ ಮುಂದುವರಿಸಿದರು. ನಂತರ ಈ ಬೇಡಿಕೆಯ ಹಿಂದಿರುವ ಕಾರಣದ ಬಗ್ಗೆ ಯೋಚಿಸಲು ಆರಂಭಿಸಿದರು.

ಅಭ್ಯರ್ಥಿಯ ಪ್ರಕಾರ, ಮಧ್ಯಾಹ್ನದ ಸಣ್ಣ ನಿದ್ದೆ ಕೆಲಸದ ವೇಳೆ ಗಮನ, ಶಕ್ತಿ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದಂತೆ.

ಇದನ್ನೂ ಓದಿ:

‘ನಿದ್ದೆ ಯಾವಾಗ ಮಾಡಿದರೂ ಪರವಾಗಿಲ್ಲ’

ವರ್ಮಾ ಅವರು ಕೆಲಸದ ಸಮಯಕ್ಕಿಂತ ಫಲಿತಾಂಶಕ್ಕೆ ಹೆಚ್ಚಿನ ಮಹತ್ವ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿದರೆ ನಿದ್ದೆ ಮಾಡುವ ಸಮಯದ ಬಗ್ಗೆ ತಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅಭ್ಯರ್ಥಿಗೆ ತಿಳಿಸಿದ್ದಾರೆ.

Gen Z ಉದ್ಯೋಗ ಸಂಸ್ಕೃತಿಯ ಬದಲಾವಣೆ?

ಈ ಘಟನೆ Gen Z ಪೀಳಿಗೆಯ ಬದಲಾಗುತ್ತಿರುವ ಕೆಲಸದ ದೃಷ್ಟಿಕೋನದ ಬಗ್ಗೆಯೂ ಚರ್ಚೆ ಹುಟ್ಟುಹಾಕಿದೆ. ಕಚೇರಿಯಲ್ಲಿ ಎಷ್ಟು ಗಂಟೆ ಕುಳಿತಿದ್ದಾನೆ ಎಂಬುದಕ್ಕಿಂತ, ಉದ್ಯೋಗಿ ಎಷ್ಟು ಉತ್ತಮವಾಗಿ ಕೆಲಸ ಪೂರ್ಣಗೊಳಿಸುತ್ತಾನೆ ಎಂಬುದೇ ಮುಖ್ಯವಾಗಬೇಕು ಎಂಬ ಅಭಿಪ್ರಾಯವನ್ನು ವರ್ಮಾ ವ್ಯಕ್ತಪಡಿಸಿದ್ದಾರೆ.

ಕೊನೆಗೆ ಏನಾಯ್ತು?

ಅಚ್ಚರಿಯ ಸಂಗತಿ ಎಂದರೆ, 30 ನಿಮಿಷಗಳ ನಿದ್ದೆಯ ಬೇಡಿಕೆ ಮುಂದಿಟ್ಟಿದ್ದರೂ ಅಭ್ಯರ್ಥಿಗೆ ಉದ್ಯೋಗ ಸಿಕ್ಕಿದೆ. ನಿದ್ದೆ ಮಾಡುವ ಬೇಡಿಕೆಯೇ ಮುಖ್ಯ ಕಾರಣವಲ್ಲ. ತನ್ನ ಕೆಲಸದ ವಿಧಾನವನ್ನು ಆತ್ಮವಿಶ್ವಾಸದಿಂದ ವಿವರಿಸುವ ಧೈರ್ಯ ಮತ್ತು ಅದಕ್ಕೆ ತಕ್ಕಂತೆ ಫಲಿತಾಂಶ ನೀಡುವ ಸಾಮರ್ಥ್ಯವೇ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪ್ರಮುಖ ಕಾರಣ ಎಂದು ವರ್ಮಾ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !