ಹೊಸದಿಗಂತ ವರದಿ ರಾಯಚೂರು:
ಜಿಲ್ಲೆಯಲ್ಲಿ ಬಿತ್ತನೆ ಆಗಿರುವ ಬೆಳೆಗಳಲ್ಲಿ ಶೇ.82 ರಷ್ಟು ಬೆಳೆ ಹಾನಿಯಾಗಿರುವುದು ಕಂಡುಬರುತ್ತಿದೆ. ಇತ್ತೀಚೆಗೆ ಆದ ಮಳೆಯಿಂದ ಜಮೀನುಗಳು ಹಸಿರಾಗಿ ಕಂಡುಬಂದರೂ ಬೆಳೆಗಳ ಬೆಳವಣಿಗೆ ಅವಧಿ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿರುವ ಕಾರಣಕ್ಕೆ ಇಳುವರಿ ಬರುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಸಚಿವ ಅಜಯ್ ಧರ್ಮಸಿಂಗ್ ಹೇಳಿದರು.
ಶನಿವಾರ ರಾಯಚೂರು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲೆಯ ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆಗಳು, ಮುಂಗಾರು ಹಂಗಾಮಿನ ಬಿತ್ತನೆ ಮತ್ತು ರಸಗೊಬ್ಬರ ಬೇಡಿಕೆಗಳು ಹಾಗೂ ಮೇವಿನ ಲಭ್ಯತೆ ಕುರಿತು ಅಧಿಕಾರಿಗಳೊಂದಿಗೆ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬ್ಯಾಂಕ್ ಮತ್ತು ಸೊಸೈಟಿಗಳಲ್ಲಿ ಬೆಳೆ ವಿಮೆಯನ್ನು ರೈತರೇ ನೇರವಾಗಿ ತುಂಬಿದರೆ ಅದಕ್ಕೆ ಬೆಳೆ ಹಾನಿಯ ಹಣವನ್ನು ವಿಮಾ ಕಂಪನಿಗಳು ನೀಡುವುದಿಲ್ಲ. ಆದರೆ, ಎಜೆಂಟರ ಮೂಲಕ ವಿಮೆ ಮಾಡಿಸಿದರೆ ಅದಕ್ಕೆ ವಿಮಾ ಕಂಪನಿಗಳು ಹಣವನ್ನು ನೀಡುತ್ತವೆ. ಎಜೆಂಟರಿಂದ ಮಾಡಿಸಿದ ವಿಮೆಗೆ ರೈತರ ವಂತಿಕೆಯನ್ನು ಎಜೆಂಟರೆ ಭರ್ತಿ ಮಾಡುತ್ತಾರೆ. ಆ ನಂತರ ವಿಮೆ ಹಣದಲ್ಲಿ ರೈತರಿಗೆ ಅರ್ಧ ಎಜೆಂಟರಿಗೆ ಅರ್ಧ ಹಂಚಿಕೊಳ್ಳುತ್ತಾರೆ ಎನ್ನುವುದು ಆಘಾತಕಾರಿ ವಿಷಯವೇ. ಈ ಗಂಭೀರವಾದ ವಿಷಯ ಕುರಿತು ವಿಮಾ ಕಂಪನಿಗಳೊಂದಿಗೆ ಚರ್ಚಿಸುವಂತೆ ಮುಖ್ಯಮಂತ್ರಿಗಳಿಗೆ ತಿಳಿಸುವುದಾಗಿ ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕುಡಿಯುವ ನೀರಿನ ಯೋಜನೆಗಾಗಿ ಹನ್ನೊಂದು ಕೋಟಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರಲ್ಲಿ ಐದು ಕೋಟಿ ಅನುದಾನ ಬಿಡುಗಡೆಯಾಗಿದೆ ಅನುಷ್ಠಾನ ವಿಳಂಬ ಮಾಡುತ್ತಿರುವ ಕಂಪನಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಜಿಲ್ಲಾ ಕೇಂದ್ರದಲ್ಲಿ ಕೆಕೆಆರ್ಡಿಬಿಯಿಂದ ಕೆಲ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಈ ಯೋಜನೆಗಳಿಗೆ ಇನ್ನು ಅನುದಾನ ನೀಡುವುದಿದೆ ಈಗಲೂ ಕೆಕೆಆರ್ಡಿಬಿಯ ಅಧ್ಯಕ್ಷ ನಾಗಿರುವುದರಿಂದ ಸದ್ಯದಲ್ಲಿ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಪರಿಶೀಲಿಸಿದ್ದು, ಜಿಲ್ಲೆಯಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿ, ರೈತರ ಸಂಕಷ್ಟವನ್ನು ಅರಿಯುವ ಉದ್ದೇಶದಿಂದ ಮುಖ್ಯಮಂತ್ರಿ ಅವರ ಸೂಚನೆಯಂತೆ ಜಿಲ್ಲೆಗೆ ಭೇಟಿ ನೀಡಿದ್ದೇನೆ ಎಂದರು.
ಮುಂಬರುವ ದಿನಗಳಲ್ಲಿ ಬಿತ್ತನೆ ಆಗುವ ಬೆಳೆಗೆ ಅಗತ್ಯವಿರುವ ರಸಾಯನಿಕ ಗೊಬ್ಬರ ದಾಸ್ತಾನಿಗೆ ಕ್ರಮ ಕೈಗೊಳ್ಳಲಾಗುವುದು. ರಸಾಯನಿಕ ಗೊಬ್ಬರ ಜಿಲ್ಲೆಯಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಅಕ್ರಮ ಕಳ್ಳಸಾಗಾಣಿಕೆ ಆಗುವುದನ್ನು ತಪ್ಪಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗುವುದು ಎಂದು ಹೇಳದರು.
ಇದನ್ನೂ ಓದಿ:
ರಾಯಚೂರು ಗ್ರಾಮೀಣ, ದೇವದುರ್ಗ, ಲಿಂಗಸುಗೂರು, ಸಿಂಧನೂರು, ಮಸ್ಕಿ ಹಾಗೂ ಮಾನ್ವಿ ಸೇರಿದಂತೆ ವಿವಿಧ ತಾಲೂಕುಗಳ ಗ್ರಾಮಗಳಿಗೆ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳನ್ನು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ರೈತರ ಜಮೀನುಗಳಿಗೆ ತೆರಳಿ ಬೆಳೆಗಳ ಪರಿಸ್ಥಿತಿಯನ್ನು ನೇರವಾಗಿ ವೀಕ್ಷಿಸಲಾಗಿದೆ ನಮ್ಮ ರೈತರು ಬಹಳ ಸಂಕಷ್ಟದಲ್ಲಿದ್ದಾರೆ ಎನ್ನುವುದು ಮನವರಿಕೆ ಆಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎನ್.ಎಸ್.ಭೋಸರಾಜು, ಸಂಸದ ಜಿ.ಕುಮಾರ ನಾಯಕ, ಶಾಸಕರಾದ ಬಸನಗೌಡ ದದ್ದಲ, ಆರ್.ಬಸನಗೌಡ ತುರ್ವಿಹಾಳ, ಜಿ.ಹಂಪಯ್ಯ ನಾಯಕ, ಬಸನಗೌಡ ಬಾದರ್ಲಿ, ಜಿಲ್ಲಾಧಿಕಾರಿಗಳಾದ ಪೂವಿತಾ.ಎಸ್ ಇದ್ದರು.



