ಹೊಸದಿಗಂತ ವರದಿ ದಾವಣಗೆರೆ:
ಕ್ಯಾರಿ ಬ್ಯಾಗ್ ಗೆ ಹೆಚ್ಚುವರಿ 10 ರೂ. ಶುಲ್ಕ ವಿಧಿಸಿದ ಜುಡಿಯೊ ಮಳಿಗೆಗೆ 30,000 ರೂ. ದಂಡ ವಿಧಿಸಿರುವ ಜಿಲ್ಲಾ ಗ್ರಾಹಕರ ಆಯೋಗವು, ಉಚಿತ ಕ್ಯಾರಿ ಬ್ಯಾಗ್ ನೀಡುವುದು ಕಡ್ಡಾಯವೆಂದು ಸ್ಪಷ್ಟಪಡಿಸಿದೆ.
ಗ್ರಾಹಕರಿಂದ ಕ್ಯಾರಿ ಬ್ಯಾಗ್ ಗೆ ಹೆಚ್ಚುವರಿಯಾಗಿ ಶುಲ್ಕ ವಸೂಲಿ ಮಾಡುವುದು ಅನ್ಯಾಯದ ವ್ಯಾಪಾರ ಹಾಗೂ ಸೇವೆಯಲ್ಲಾದ ನಿರ್ಲಕ್ಷ್ಯ ಎಂದು ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ತೀರ್ಪು ನೀಡಿದೆ.
ನಗರದ ಪಿ.ಜೆ. ಬಡಾವಣೆಯ ಅಕ್ಕಮಹಾದೇವಿ ರಸ್ತೆಯಲ್ಲಿರುವ ಜುಡಿಯೊ(ತೋಶಾನಿ ಎಂಪೋರಿಯಂ ಅವೆನ್ಯೂ) ಮಳಿಗೆಯಲ್ಲಿ ಬಟ್ಟೆ ಖರೀದಿಸಿದ್ದ ದೂರುದಾರ ರಾಜೇಂದ್ರ ಎಂಬುವರಿಂದ ಕ್ಯಾರಿ ಬ್ಯಾಗ್ ಗಾಗಿ ಹೆಚ್ಚುವರಿಯಾಗಿ 10 ರೂ. ವಸೂಲಿ ಮಾಡಿದ್ದಕ್ಕಾಗಿ ಆಯೋಗವು ಈ ಆದೇಶ ಹೊರಡಿಸಿದೆ. ಕ್ಯಾರಿ ಬ್ಯಾಗ್ ಗೆ ತಮ್ಮಿಂದು ಹಣ ವಸೂಲಿ ಮಾಡಿದ್ದನ್ನು ಪ್ರಶ್ನಿಸಿ ದೂರುದಾರ ರಾಜೇಂದ್ರ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರನ್ನು ಕೂಲಂಕುಷವಾಗಿ ಪರಿಶೀಲಿಸಿದ ಆಯೋಗವು, ಗ್ರಾಹಕರಿಂದ ಕ್ಯಾರಿ ಬ್ಯಾಗ್ ಶುಲ್ಕ ವಸೂಲಿ ಮಾಡುವುದು ಕಾನೂನುಬಾಹಿರ ಹಾಗೂ ಸೇವಾ ಲೋಪ ಎಂದು ಸ್ಪಷ್ಟಪಡಿಸಿದೆ. ಸೇವೆಯಲ್ಲಾದ ನಿರ್ಲಕ್ಷ್ಯ, ಅನ್ಯಾಯದ ವ್ಯಾಪಾರ ಮತ್ತು ದೂರಿನ ಖರ್ಚು ಸೇರಿ ದೂರುದಾರರಿಗೆ 10,000 ರೂ.ಗಳ ಪರಿಹಾರ ಹಾಗೂ ಈಗಾಗಲೇ ಗ್ರಾಹಕರು ಪಾವತಿಸಿರುವ 10 ರೂ. ಹಿಂತಿರುಗಿಸುವಂತೆ ಜುಡಿಯೊ ಸಂಸ್ಥೆಗೆ ಆಯೋಗದಿಂದ ಆದೇಶಿಸಲಾಗಿದೆ.
ಇದನ್ನೂ ಓದಿ:
ಇದರೊಂದಿಗೆ ಗ್ರಾಹಕ ಕಾನೂನು ನೆರವು ಖಾತೆಗೆ 20,000 ರೂ. ಜಮಾ ಮಾಡಲು ಸಂಸ್ಥೆಗೆ ಸೂಚಿಸಿದ್ದು, ಒಟ್ಟು 30,000 ರೂ. ಮೊತ್ತವನ್ನು ಆದೇಶದ ದಿನಾಂಕದಿಂದ ಒಂದು ತಿಂಗಳೊಳಗೆ ಪಾವತಿಸಲು ಆದೇಶಿಸಲಾಗಿದೆ.
ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗೆ ಉಚಿತವಾಗಿ ಕ್ಯಾರಿ ಬ್ಯಾಗ್ ಒದಗಿಸುವುದು ಕಡ್ಡಾಯವಾಗಿದೆ. ಈ ಆದೇಶವು ಎಲ್ಲಾ ಸಗಟು ವ್ಯಾಪಾರಿ, ರಿಟೇಲ್ ಮಾರಾಟಗಾರರು, ದೊಡ್ಡ ಮಾಲ್ ಹಾಗೂ ಇನ್ನಿತರ ಎಲ್ಲಾ ಮಾರಾಟ ಮಳಿಗೆಗಳಿಗೂ ಅನ್ವಯಿಸುತ್ತದೆ ಎಂದು ಆಯೋಗ ತಿಳಿಸಿದೆ. ಈ ಮಹತ್ವದ ಆದೇಶವನ್ನು ದಾವಣಗೆರೆ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷೆ ಹೆಚ್.ಎನ್.ಮೀನಾ ಹಾಗೂ ಸದಸ್ಯ ಸಿ.ಎಸ್.ತ್ಯಾಗರಾಜನ್ ಅವರುಗಳನ್ನು ಒಳಗೊಂಡ ಪೀಠವು ಹೊರಡಿಸಿದೆ ಎಂದು ಆಯೋಗದ ಸಹಾಯಕ ರಿಜಿಸ್ಟ್ರಾರ್ ತಿಳಿಸಿದ್ದಾರೆ.



