ಹೊಸದಿಗಂತ ವರದಿ ದಾವಣಗೆರೆ:
ಮಕ್ಕಳಾಗದಂತೆ ಶಸ್ತ್ರಚಿಕಿತ್ಸೆ ಮಾಡಿಸಿದ್ದರೂ ಮತ್ತೆ ಗರ್ಭಿಣಿಯಾಗಿದ್ದ ಮಹಿಳೆಯೊಬ್ಬರು, ಉಸಿರಾಟದ ಸಮಸ್ಯೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ವೇಳೆ ಮೃತಪಟ್ಟಿದ್ದಾರೆ. ಮಹಿಳೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ದಾವಣಗೆರೆ ತಾಲೂಕಿನ ಕೈದಾಳೆ ಗ್ರಾಮದ ತಿರುಮಲಾ (34) ಮೃತಪಟ್ಟ ಮಹಿಳೆ. ರಾಯಚೂರು ಜಿಲ್ಲೆಯ ಮೂಲದ ತಿರುಮಲಾ ಅವರಿಗೆ ಇಬ್ಬರು ಮಕ್ಕಳಿದ್ದು, ಕಳೆದ ಮೇ 22ರಂದು ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಲ್ಯಾಪರೋಸ್ಕೋಪಿಕ್ ಟ್ಯುಬೋಕ್ಟಮಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿತ್ತು. ಆದರೂ ಮತ್ತೆ ಗರ್ಭಿಣಿಯಾಗಿದ್ದರಿಂದ ಪತಿ ದೀಕ್ಷಿತ್ ಅವರನ್ನು ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು.
ಸುಮಾರು ಎರಡೂವರೆ ತಿಂಗಳ ಗರ್ಭಿಣಿಯಾಗಿದ್ದ ತಿರುಮಲಾಗೆ ಗರ್ಭಪಾತ ಮಾಡಿಸಿ, ಮತ್ತೊಮ್ಮೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆಯ ಬಳಿಕ ಆರೋಗ್ಯವಾಗಿದ್ದ ಅವರಿಗೆ ಭಾನುವಾರ ಮಧ್ಯಾಹ್ನದಿಂದ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ತಕ್ಷಣ ಐಸಿಯುಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ:
ತಿರುಮಲಾ ಸಾವಿಗೆ ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಕುಟುಂಬಸ್ಥರು, ಸಂಬಂಧಪಟ್ಟ ವೈದ್ಯರನ್ನು ಸೇವೆಯಿಂದ ವಜಾಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಬಡಾವಣೆ ಠಾಣೆ ಪೊಲೀಸರು ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಎಂ.ಬಿ. ನಾಗೇಂದ್ರಪ್ಪ, ಸಾವಿನ ನಿಖರ ಕಾರಣ ತಿಳಿಯಲು ತಜ್ಞ ವೈದ್ಯರ ಸಮಿತಿ ರಚಿಸಲಾಗುವುದು ಎಂದು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆಯಾದ ನಾಲ್ಕು ದಿನಗಳ ಬಳಿಕ ಮಹಿಳೆ ಮೃತಪಟ್ಟಿದ್ದು, ಸೋಂಕಿನಿಂದ ಸಾವು ಸಂಭವಿಸಿರುವ ಸಾಧ್ಯತೆಯನ್ನೂ ಪರಿಶೀಲಿಸಲಾಗುವುದು ಎಂದಿದ್ದಾರೆ. ಟ್ಯುಬೋಕ್ಟಮಿ ಶಸ್ತ್ರಚಿಕಿತ್ಸೆ ವಿಫಲವಾದರೆ ಪರಿಹಾರ ನೀಡಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.
ಮಹಿಳೆಯ ಸಾವಿನ ನಿಖರ ಕಾರಣ ತಜ್ಞ ವೈದ್ಯರ ಸಮಿತಿಯ ತನಿಖೆಯಿಂದ ತಿಳಿದುಬರಬೇಕಿದೆ.



