ಸಮತೋಲಿತ ಆಹಾರ ಶೈಲಿಯಲ್ಲಿ ಪೋಷಕಾಂಶಗಳಷ್ಟೇ ಮುಖ್ಯವಾದುದು ನಾರಿನಂಶ ಅಥವಾ ಫೈಬರ್. ದೈನಂದಿನ ಆಹಾರದಲ್ಲಿ ಫೈಬರ್ ಯುಕ್ತ ಪದಾರ್ಥಗಳನ್ನು ಸೇರಿಸಿಕೊಳ್ಳುವುದರಿಂದ ದೇಹಕ್ಕೆ ಅನೇಕ ರೀತಿಯ ಧನಾತ್ಮಕ ಆರೋಗ್ಯ ಪ್ರಯೋಜನಗಳು ದೊರೆಯುತ್ತವೆ.
ಸರಾಗ ಜೀರ್ಣಕ್ರಿಯೆ ಮತ್ತು ಮಲಬದ್ಧತೆಯಿಂದ ಮುಕ್ತಿ
ಫೈಬರ್ ಆಹಾರದ ಪ್ರಮುಖ ಕೆಲಸವೆಂದರೆ ಜೀರ್ಣಾಂಗವ್ಯೂಹವನ್ನು ಸುಸ್ಥಿತಿಯಲ್ಲಿಡುವುದು. ಇದು ಮಲವನ್ನು ಮೃದುಗೊಳಿಸಿ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ನಿಯಮಿತವಾಗಿ ನಾರಿನಂಶ ಸೇವಿಸುವುದರಿಂದ ಮಲಬದ್ಧತೆ, ಗ್ಯಾಸ್ಟ್ರಿಕ್ ಮತ್ತು ಹೊಟ್ಟೆಯುರಿತದಂತಹ ಸಮಸ್ಯೆಗಳು ಶಾಶ್ವತವಾಗಿ ದೂರವಾಗುತ್ತವೆ.
ತೂಕ ನಿಯಂತ್ರಣಕ್ಕೆ ಸಹಕಾರಿ
ದೇಹದ ತೂಕವನ್ನು ಇಳಿಸಿಕೊಳ್ಳಲು ಬಯಸುವವರಿಗೆ ಫೈಬರ್ ಅತ್ಯುತ್ತಮ ಆಹಾರ. ನಾರಿನಂಶವಿರುವ ಪದಾರ್ಥಗಳನ್ನು ಸೇವಿಸಿದಾಗ ಹೊಟ್ಟೆ ಬೇಗನೆ ತುಂಬಿದ ಅನುಭವವಾಗುತ್ತದೆ ಮತ್ತು ಹಸಿವನ್ನು ನಿಯಂತ್ರಣದಲ್ಲಿಡುತ್ತದೆ. ಇದರಿಂದ ಅನಗತ್ಯವಾಗಿ ಹೆಚ್ಚು ಆಹಾರ ಸೇವಿಸುವುದು ತಪ್ಪಿ, ತೂಕವನ್ನು ಸುಲಭವಾಗಿ ನಿರ್ವಹಿಸಬಹುದು.
ರಕ್ತದಲ್ಲಿನ ಸಕ್ಕರೆ ಮಟ್ಟದ ಸಮತೋಲನ
ಮಧುಮೇಹಿಗಳಿಗೆ ನಾರಿನಂಶ ಅತ್ಯಂತ ಲಾಭದಾಯಕ. ಫೈಬರ್ ರಕ್ತದಲ್ಲಿ ಸಕ್ಕರೆಯ ಅಂಶವನ್ನು ತಕ್ಷಣವೇ ಹೀರಿಕೊಳ್ಳಲು ಬಿಡದೆ, ಸಕ್ಕರೆಯ ಪ್ರಮಾಣವನ್ನು ನಿಧಾನವಾಗಿ ದೇಹಕ್ಕೆ ಬಿಡುಗಡೆ ಮಾಡುತ್ತದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಂಟ್ರೋಲ್‌ನಲ್ಲಿಡಲು ನೆರವಾಗುತ್ತದೆ.
ಹೃದಯದ ಆರೋಗ್ಯ ರಕ್ಷಣೆ
ಸಕರಾರಾತ್ಮಕ ಜೀವನಶೈಲಿಗೆ ನಾರಿನಂಶ ಪೂರಕ. ಇದು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಯಾಗುವುದು ತಪ್ಪಿ, ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತದ ಅಪಾಯಗಳು ಗಣನೀಯವಾಗಿ ಕಡಿಮೆಯಾಗುತ್ತವೆ.
ಕರುಳಿನ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿ
ಫೈಬರ್ ಕರುಳಿನಲ್ಲಿರುವ ನೈಸರ್ಗಿಕ ಉಪಕಾರಿ ಬ್ಯಾಕ್ಟೀರಿಯಾಗಳಿಗೆ ಆಹಾರವಾಗಿ ಕೆಲಸ ಮಾಡುತ್ತದೆ. ಕರುಳಿನ ಕ್ರಿಯೆ ಸರಿ ಇದ್ದಾಗ ದೇಹದ ರೋಗನಿರೋಧಕ ಶಕ್ತಿ ತಾನಾಗಿಯೇ ಹೆಚ್ಚಾಗುತ್ತದೆ. ಅಲ್ಲದೆ, ಇದು ಕರುಳಿನ ಕ್ಯಾನ್ಸರ್ ಬರದಂತೆ ತಡೆಯುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.
ಫೈಬರ್ ಪಡೆಯಲು ಏನು ಸೇವಿಸಬೇಕು?
ಸೇಬು, ಕಿತ್ತಳೆ, ಸೀಬೆಹಣ್ಣು, ಹಸಿರು ತರಕಾರಿಗಳು, ದ್ವಿದಳ ಧಾನ್ಯಗಳು, ಓಟ್ಸ್, ಬ್ರೌನ್ ರೈಸ್ ಮತ್ತು ಒಣ ಹಣ್ಣುಗಳಲ್ಲಿ ನಾರಿನಂಶ ಸಮೃದ್ಧವಾಗಿದೆ. ದಿನನಿತ್ಯದ ಆಹಾರದಲ್ಲಿ ಇವುಗಳನ್ನು ಸೇರಿಸಿ, ಉತ್ತಮ ಮತ್ತು ಸಮಗ್ರ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ.



