ಹೊಸಡದಿಗಂತ ಡಿಜಿಟಲ್ ಡೆಸ್ಕ್:
ಜಪಾನ್ ದೇಶದ ಜನರ ಶಿಸ್ತು, ಸಮಯ ಪ್ರಜ್ಞೆ ಮತ್ತು ಪ್ರಾಮಾಣಿಕತೆ ವಿಶ್ವದಲ್ಲೇ ಹೆಸರುವಾಸಿ. ಇದಕ್ಕೆ ಸಾಕ್ಷಿ ಎನ್ನುವಂತೆ ಇತ್ತೀಚೆಗೆ ಜಪಾನ್ನಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಜಪಾನ್ಗೆ ಭೇಟಿ ನೀಡಿದ್ದ ಭಾರತೀಯ ಮಹಿಳೆಯೊಬ್ಬರು ತಮ್ಮ ಪರ್ಸ್ ಅನ್ನು ಕಳೆದುಕೊಂಡಿದ್ದರು. ಆದರೆ, ಜಪಾನ್ನ ಸ್ಥಳೀಯರ ಪ್ರಾಮಾಣಿಕತೆಯಿಂದಾಗಿ ಆ ಪರ್ಸ್ ಕೆಲವೇ ಗಂಟೆಗಳಲ್ಲಿ ಅವರಿಗೆ ಮರಳಿ ಸಿಕ್ಕಿದೆ.
ಪರ್ಸ್ ಮರಳಿ ಪಡೆದ ಭಾರತೀಯ ಮೂಲದ ಟ್ರಾವೆಲ್ ಕಂಟೆಂಟ್ ಕ್ರಿಯೇಟರ್ ಸೋನಂ ಮಿಧಾ ಅವರು ತಮ್ಮ ಈ ಅನುಭವವನ್ನು ಇನ್ಸ್ಟಾಗ್ರಾಮ್ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
https://www.instagram.com/reel/DcG1EEezxdB/?igsi=MTZxeGpoYzZiZzR0cA==
ನಡೆದಿದ್ದೇನು?
ಸೋನಂ ಮಿಧಾ ಅವರು ಜಪಾನ್ನಲ್ಲಿ ತಮ್ಮ ಸ್ನೇಹಿತರೊಂದಿಗೆ ಬಾಡಿಗೆ ಬೈಸಿಕಲ್ ಮೂಲಕ ರೆಸ್ಟೋರೆಂಟ್ಗೆ ಹೋಗಿದ್ದರು. ರೆಸ್ಟೋರೆಂಟ್ ಒಳಗೆ ಹೋಗುವ ಅವಸರದಲ್ಲಿ, ಅವರು ತಮ್ಮ ಪರ್ಸ್ ಅನ್ನು ಸೈಕಲ್ನ ಮುಂಭಾಗದ ಬಾಸ್ಕೆಟ್ನಲ್ಲಿಯೇ ಮರೆತು ಹೋಗಿದ್ದರು. ಸುಮಾರು ಒಂದು ಗಂಟೆಯ ನಂತರ ರೆಸ್ಟೋರೆಂಟ್ನಿಂದ ಹೊರಬಂದಾಗ ಅವರಿಗೆ ಪರ್ಸ್ ಕಾಣೆಯಾಗಿರುವುದು ಗೊತ್ತಾಗಿದೆ.
ʼನಾನು ಇಂದು ಸುಮಾರು 1 ಲಕ್ಷ ರೂಪಾಯಿಗಳನ್ನು ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದೆʼ ಎಂದು ಸೋನಂ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಆ ಪರ್ಸ್ನಲ್ಲಿ ನಗದು ಹಣ, ಮನೆಯ ಕೀ ಮತ್ತು ದುಬಾರಿ ಬೆಲೆಯ ಮೈಕ್ರೋಫೋನ್ ಇತ್ತು. ಅಪರಿಚಿತ ದೇಶದಲ್ಲಿ ಇವೆಲ್ಲವೂ ಕಳೆದುಹೋದಾಗ ಸೋನಂ ಯಾರೋ ಅದನ್ನು ಕದ್ದಿದ್ದಾರೆ ಎಂದು ಭಾವಿಸಿ ಕಂಗಾಲಾಗಿದ್ದರು.
ಪೊಲೀಸ್ ಠಾಣೆಯಲ್ಲಿ ಕಾದಿತ್ತು ಅಚ್ಚರಿ!
ಕೊನೆಯ ಪ್ರಯತ್ನವಾಗಿ ಸೋನಂ ಅವರು ಪರ್ಸ್ ಕಳುವಾಗಿರುವ ಬಗ್ಗೆ ದೂರು ನೀಡಲು ಅಲ್ಲಿಯ ಹತ್ತಿರದ ಪೊಲೀಸ್ ಠಾಣೆಗೆ ತೆರಳಿದರು. ಅಲ್ಲಿ ಪೊಲೀಸರಿಗೆ ತಮ್ಮ ಪರ್ಸ್ನಲ್ಲಿದ್ದ ವಸ್ತುಗಳ ವಿವರಣೆಯನ್ನು ನೀಡಿದರು. ಸೋನಂ ವಿವರಣೆ ನೀಡುತ್ತಿದ್ದಂತೆ ಪೊಲೀಸರು ಮುಗುಳ್ನಕ್ಕು, “ಸ್ವಲ್ಪ ಸಮಯದ ಹಿಂದೆಯಷ್ಟೇ ದಾರಿಯಲ್ಲಿ ಸಿಕ್ಕ ಇಂತಹದ್ದೇ ಬ್ಯಾಗ್ ಒಂದನ್ನು ಸಾರ್ವಜನಿಕರೊಬ್ಬರು ತಂದು ಕೊಟ್ಟಿದ್ದಾರೆ” ಎಂದು ಪರ್ಸ್ ಅನ್ನು ಹೊರತೆಗೆದಿದ್ದಾರೆ. ಅದನ್ನು ನೋಡಿದ ತಕ್ಷಣ ಸೋನಂಗೆ ಆಶ್ಚರ್ಯದ ಜತೆಗೆ ಭಾರಿ ಸಂತಸವಾಗಿದೆ. ಏಕೆಂದರೆ ಅದು ಅವರದ್ದೇ ಪರ್ಸ್ ಆಗಿತ್ತು.
ಒಂದು ರೂಪಾಯಿಯೂ ಕಳುವಾಗಿರಲಿಲ್ಲ
ಆಶ್ಚರ್ಯದ ಸಂಗತಿಯೆಂದರೆ, ಪರ್ಸ್ನಲ್ಲಿ ಎಷ್ಟು ಹಣವಿತ್ತೋ ಅಷ್ಟೂ ಹಣ ಸುರಕ್ಷಿತವಾಗಿತ್ತು. ದುಬಾರಿ ಮೈಕ್ರೋಫೋನ್ ಸೇರಿದಂತೆ ಯಾವುದೇ ಒಂದು ವಸ್ತುವೂ ಕಳುವಾಗಿರಲಿಲ್ಲ. ಪರ್ಸ್ ಸಿಕ್ಕ ವ್ಯಕ್ತಿ ಅದರಲ್ಲಿದ್ದ ವಸ್ತುಗಳನ್ನು ಮುಟ್ಟದೆ ಪೊಲೀಸರಿಗೆ ಒಪ್ಪಿಸಿದ್ದರು.
ಇದನ್ನೂ ಓದಿ:
ಇದರಿಂದ ಭಾವುಕರಾದ ಸೋನಂ ಮಿಧಾ ಕಣ್ಣೀರು ಹಾಕುತ್ತಾ, ʼನನಗೆ ಅಳು ಬರುತ್ತಿದೆ. ಇಲ್ಲಿನ ಜನರು ಎಷ್ಟು ಒಳ್ಳೆಯವರು ಮತ್ತು ದಯಾಳುಗಳು. ಜಗತ್ತಿನಲ್ಲಿ ಮಾನವೀಯತೆ ಇನ್ನು ಬದುಕಿದೆ ಎಂಬುದಕ್ಕೆ ಇದುವೇ ಸಾಕ್ಷಿ. ಥ್ಯಾಂಕ್ ಯು ಜಪಾನ್ʼ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಸದ್ಯ ಸೋನಂ ಅವರ ಈ ಇನ್ಸ್ಟಾಗ್ರಾಮ್ ವಿಡಿಯೋ ಭಾರಿ ವೈರಲ್ ಆಗುತ್ತಿದೆ.



