August 23, 2026
Sunday, August 23, 2026
spot_img

Viral | ಮದುವೆ ಮಂಟಪದಲ್ಲೇ ಮಾನವೀಯತೆ ಮೆರೆದ ವಧು: ಅಸಲಿಗೆ ಅಲ್ಲಿ ನಡೆದಿದ್ದಾದ್ರೂ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದುವೆ ಎಂದರೆ ಸಂಭ್ರಮ, ಶಾಸ್ತ್ರಗಳು, ಬಂಧು-ಬಳಗದ ಸಡಗರ, ಹೊಸ ಜೀವನದ ಆರಂಭ. ಇಂತಹ ವಿಶೇಷ ದಿನದಂದು ಪ್ರತಿಯೊಬ್ಬ ವಧು ತನ್ನ ಮದುವೆಯ ಕ್ಷಣಗಳನ್ನು ಆನಂದಿಸಲು ಬಯಸೋದು ಸಹಜ. ಆದರೆ ಕೇರಳದ ವೈದ್ಯೆಯೊಬ್ಬರಿಗೆ ತಮ್ಮ ಮದುವೆಯ ದಿನವೇ ವೃತ್ತಿಯ ಮೇಲಿನ ಬದ್ಧತೆ ಮತ್ತು ಮಾನವೀಯತೆ ಎಲ್ಲಕ್ಕಿಂತ ದೊಡ್ಡದು ಅನ್ನೋದನ್ನು ಸಾಬೀತು ಮಾಡಿದ್ದಾರೆ.

ಮಾಡುವೆ ಮಂಟಪದಲ್ಲಿ ವಧು ಮದುವೆಯ ಸಂಭ್ರಮವನ್ನು ಕೆಲಕಾಲ ಬದಿಗಿಟ್ಟು ಅಸ್ವಸ್ಥರಾದ ಇಬ್ಬರು ಕ್ಯಾಟರಿಂಗ್ ಸಿಬ್ಬಂದಿಗೆ ತಕ್ಷಣ ಚಿಕಿತ್ಸೆ ನೀಡಿದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಮದುವೆ ಮಧ್ಯೆಯೇ ಎದುರಾದ ಅನಿರೀಕ್ಷಿತ ಪರಿಸ್ಥಿತಿ

ಕಣ್ಣೂರಿನಲ್ಲಿ ವೈದ್ಯರಾದ ಶಿರಿನ್ ಸುಬೈರ್ ಹಾಗೂ ವೈದ್ಯ ರಿಜಾಝ್ ಅವರ ವಿವಾಹ ಸಮಾರಂಭ ನಡೆಯುತ್ತಿತ್ತು. ಮದುವೆಯ ಕಾರ್ಯಕ್ರಮಗಳು ನಡೆಯುತ್ತಿದ್ದ ಸಂದರ್ಭದಲ್ಲೇ ಕ್ಯಾಟರಿಂಗ್ ತಂಡದಲ್ಲಿದ್ದ ಇಬ್ಬರು ಮಹಿಳೆಯರಿಗೆ ಏಕಾಏಕಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಓರ್ವ ಮಹಿಳೆಗೆ ಮೂಗಿನಿಂದ ರಕ್ತಸ್ರಾವವಾಗಿದ್ದರೆ, ಮತ್ತೋರ್ವರಿಗೆ ತಲೆ ಸುತ್ತು ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ.

ಅಲ್ಲಿದ್ದವರಿಗೆ ಶಿರಿನ್ ಅವರು ವೈದ್ಯೆ ಎಂಬುದು ತಿಳಿದಿದ್ದರಿಂದ ಕೂಡಲೇ ಅವರ ಸಹಾಯ ಕೋರಿದ್ದಾರೆ.

ವಧುವಿನ ಉಡುಪಿನಲ್ಲೇ ಚಿಕಿತ್ಸೆ

ಸಹಾಯಕ್ಕಾಗಿ ಕರೆ ಬಂದ ತಕ್ಷಣ ಶಿರಿನ್ ಅವರು ಯಾವುದೇ ವಿಳಂಬ ಮಾಡದೆ ಅಸ್ವಸ್ಥರಾದ ಇಬ್ಬರ ಬಳಿಗೆ ತೆರಳಿದ್ದಾರೆ. ಮದುವೆಯ ವಧುವಿನಂತೆ ಸಿಂಗಾರಗೊಂಡಿದ್ದರೂ, ಆ ಕ್ಷಣದಲ್ಲಿ ಅವರು ತಮ್ಮ ವೈದ್ಯಕೀಯ ಕರ್ತವ್ಯಕ್ಕೆ ಆದ್ಯತೆ ನೀಡಿದ್ದಾರೆ. ಇಬ್ಬರ ಆರೋಗ್ಯ ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ಮದುವೆಯ ಸಂಭ್ರಮದ ನಡುವೆ ನಡೆದ ಈ ದೃಶ್ಯವನ್ನು ಅಲ್ಲಿದ್ದವರು ವಿಡಿಯೋ ಮಾಡಿದ್ದಾರೆ. ಅದೇ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಿರಿನ್ ಅವರ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

‘ಮೊದಲು ವೈದ್ಯೆ, ನಂತರ ವಧು’

ಶಿರಿನ್ ಅವರ ಈ ನಡೆಗೆ ಪ್ರತಿಕ್ರಿಯಿಸಿರುವ ಅನೇಕರು, ವೈದ್ಯ ವೃತ್ತಿಯ ನಿಜವಾದ ಅರ್ಥವನ್ನು ಅವರು ತಮ್ಮ ಕಾರ್ಯದ ಮೂಲಕ ತೋರಿಸಿದ್ದಾರೆ ಎಂದು ಹೇಳಿದ್ದಾರೆ. ‘ಮೊದಲು ವೈದ್ಯೆ, ನಂತರ ವಧು’ ಎಂಬ ಮಾತು ಈ ಘಟನೆಗೆ ಸೂಕ್ತವಾಗಿ ಹೊಂದುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಮದುವೆಯಂತಹ ವೈಯಕ್ತಿಕ ಜೀವನದ ಅತ್ಯಂತ ಮಹತ್ವದ ಕ್ಷಣದಲ್ಲೂ, ಸಹಾಯದ ಅಗತ್ಯವಿದ್ದವರನ್ನು ಕಡೆಗಣಿಸದೆ ತಕ್ಷಣ ಸ್ಪಂದಿಸಿರುವುದು ಅನೇಕರ ಮನಮುಟ್ಟಿದೆ.

ಶಿರಿನ್ ಅವರ ಈ ನಡೆ ಕೇವಲ ವೈರಲ್ ವಿಡಿಯೋ ಆಗಿ ಉಳಿಯದೆ, ವೃತ್ತಿಪರ ಬದ್ಧತೆ ಮತ್ತು ಮಾನವೀಯತೆ ಯಾವ ಸಂದರ್ಭದಲ್ಲೂ ಮುಖ್ಯ ಎಂಬ ಸಂದೇಶವನ್ನು ನೀಡಿದೆ. ಮದುವೆಯ ದಿನದ ಸಂಭ್ರಮದ ನಡುವೆ ಅಸ್ವಸ್ಥರಾದವರ ನೆರವಿಗೆ ಧಾವಿಸಿದ ಈ ವೈದ್ಯೆಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !