ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋ ಕುರಿತು ತಮಿಳುನಾಡು ಕೈಗಾರಿಕಾ ಸಚಿವೆ ಎಸ್. ಕೀರ್ತನಾ ಅವರು ಭಾನುವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೆಸ್ಟರ್ನ್ ಡ್ರೆಸ್ ಧರಿಸಿ ಕಾರಿನಿಂದ ಇಳಿಯುತ್ತಿರುವ ಮಹಿಳೆಯ ವಿಡಿಯೋವನ್ನು ಸಚಿವೆ ಕೀರ್ತನಾ ಅವರದ್ದೇ ಎಂದು ಬಿಂಬಿಸಿ ಸುಳ್ಳು ಸುದ್ದಿ ಹರಡಲಾಗಿತ್ತು. ಈ ಕುರಿತು ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ಅವರು, ವಿಡಿಯೋದಲ್ಲಿರುವ ಮಹಿಳೆ ತಾನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಮಹಿಳೆಯರ ಬಟ್ಟೆ ಮತ್ತು ನೋಟದ ಆಧಾರದ ಮೇಲೆ ಅವರನ್ನು ಸಾರ್ವಜನಿಕವಾಗಿ ವಿಚಾರಣೆಗೆ ಒಳಪಡಿಸುವ ಸಮಾಜದ ಮಹಿಳಾ ವಿರೋಧಿ ಮನಸ್ಥಿತಿಯನ್ನು ಕಟುವಾಗಿ ಪ್ರಶ್ನಿಸಿದ್ದಾರೆ.
ರಾಜಕೀಯ ವಿರೋಧಿಗಳ ವಿರುದ್ಧ ಕಿಡಿ
ಈ ವಿವಾದವು ಕೆಲವು ಜನರ ಹಿಂದುಳಿದ ಮತ್ತು ಸಂಕುಚಿತ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕೀರ್ತನಾ ಹೇಳಿದ್ದಾರೆ. ತಮ್ಮ ರಾಜಕೀಯ ವಿರೋಧಿಗಳು ವೈಯಕ್ತಿಕ ದಾಳಿಗೆ ಇಳಿದಿದ್ದಾರೆ ಎಂದು ಆರೋಪಿಸಿದ ಅವರು, ʼಮಹಿಳೆಯರ ವಿರುದ್ಧ ಕೆಟ್ಟದಾಗಿ ಮಾತನಾಡುವ ಇತಿಹಾಸವಿರುವ ನಾಯಕನ ಬೆಂಬಲಿಗರಿಂದ ನಾವು ಇದಕ್ಕಿಂತ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ?ʼ ಎಂದು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ಹೆಸರೆತ್ತದೆ ಕಿಡಿಕಾರಿದ್ದಾರೆ.
ನಮ್ಮ ಸರ್ಕಾರದ ನೀತಿಗಳು, ಆಡಳಿತ ಅಥವಾ ಅಭಿವೃದ್ಧಿ ಕೆಲಸಗಳ ಬಗ್ಗೆ ನೇರವಾಗಿ ಪ್ರಶ್ನೆ ಮಾಡಲು ಯೋಗ್ಯತೆ ಇಲ್ಲದವರು, ಈಗ ನಾಯಕರ ವೈಯಕ್ತಿಕ ಜೀವನದ ಬಗ್ಗೆ ಇಲ್ಲಸಲ್ಲದ ಕಥೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ವಿಡಿಯೋದಲ್ಲಿದ್ದ ಮಹಿಳೆಗೆ ಕ್ಷಮೆಯಾಚನೆ
ತಮ್ಮ ಮುಖದ ಹೋಲಿಕೆ ಇರುವುದಕ್ಕಾಗಿಯೇ ಈ ಅನಗತ್ಯ ವಿವಾದಕ್ಕೆ ಸಿಲುಕಿದ ವಿಡಿಯೋದಲ್ಲಿದ್ದ ಅಪರಿಚಿತ ಮಹಿಳೆಗೆ ಸಚಿವೆ ಕೀರ್ತನಾ ಕ್ಷಮೆ ಕೇಳಿದ್ದಾರೆ. ʼನನ್ನ ಹೋಲಿಕೆ ಇರುವುದರಿಂದಲೇ ನಿಮ್ಮನ್ನು ಈ ವಿವಾದಕ್ಕೆ ಎಳೆದು ತರಲಾಗಿದೆ, ಅದಕ್ಕಾಗಿ ಕ್ಷಮೆಯಿರಲಿ. ನೀವು ತುಂಬಾ ಸುಂದರವಾಗಿ ಕಾಣುತ್ತಿದ್ದೀರಿ. ನಿಮ್ಮದೇ ಆದ ನಿಯಮಗಳ ಪ್ರಕಾರ ನೀವು ಜೀವನವನ್ನು ಆನಂದಿಸಿʼ ಎಂದು ಅವರು ಬರೆದುಕೊಂಡಿದ್ದಾರೆ.



