August 26, 2026
Wednesday, August 26, 2026
spot_img

ಯುಪಿಐ @10 🇮🇳| ಹತ್ತು ವರ್ಷಗಳಲ್ಲಿ ಕ್ಯಾಶ್‌ ರಿಪ್ಲೇಸ್‌ ಮಾಡಿದ UPI, ಇದರ ಸ್ಪೆಷಾಲಿಟಿ ಏನು?

ಸರಿಯಾಗಿ ಹತ್ತು ವರ್ಷಗಳ ಹಿಂದೆ ಪ್ರತೀ ಮನೆಯ ಟ್ರಂಕಿನಲ್ಲೂ, ಕಪಾಟಿನಲ್ಲೂ, ಬೇಳೆ ಡಬ್ಬದಲ್ಲೂ, ಜಾಮಿಟ್ರಿ ಬಾಕ್ಸಿನಲ್ಲೂ ದುಡ್ಡು ಇರುತ್ತಿತ್ತು. ಆನ್‌ಲೈನ್‌ ಪೇಮೆಂಟ್‌ ಎನ್ನುವ ಹೆಸರು, ಕಾನ್ಸೆಪ್ಟ್‌, ಐಡಿಯಾ ಕೂಡ ಯಾರಿಗೂ ಇರಲಿಲ್ಲ. ಎಲ್ಲಿಗೆ ಹೋಗಬೇಕಾದ್ರೂ ಕ್ಯಾಶ್‌ ತೆಗೆದುಕೊಂಡು ಹೋಗೋದು ಮಾಮೂಲಿಯಾಗಿತ್ತು. ಚಿಲ್ಲರೆ ಇಲ್ಲ ಎಂದಾದರೆ ನಾಳೆ ಇಸ್ಕೋತಿನೋ ಎಂದೋ, ಕಾಫಿ ಪುಡಿ ಕೊಡಿ ಎಂದೋ, ಒಂದು ರೂಪಾಯಿ ಚಾಕೋಲೆಟ್‌ ಕೊಟ್ಟುಬಿಡಿ ಎಂದು ಹೇಳುವುದಷ್ಟೇ ಗೊತ್ತಿತ್ತು. ಆದರೆ ಈಗ 26 ರೂಪಾಯಿ ಬಿಲ್‌ ಆದರೆ 26 ರೂಪಾಯಿಯನ್ನೂ ಯುಪಿಐ ಮೂಲಕ ಕೊಟ್ಟು ಮನೆಗೆ ಬಂದುಬಿಡುತ್ತೀವಿ. ಹತ್ತು ವರ್ಷದ ಹಿಂದೆ ಯುಪಿಐ ವ್ಯವಸ್ಥೆ ಇಲ್ಲದೇ ನಮ್ಮ ಲೈಫ್‌ ಹೇಗಿತ್ತು ಅನ್ನೋದು ಮರೆತೇ ಹೋದಂತಿದೆ. ನೆಂಟರಿಷ್ಟರು ಹೋಗುವಾಗ ಕೊಡುವ ಐದು ರೂಪಾಯಿಗಾಗಿ ಕಾದು ಕುಳಿತಿದ್ದ ನಾವು ಇದೀಗ ಬರ್ಥ್‌ಡೇ ದಿನ ಗಿಫ್ಟ್‌ ಏನು ಬೇಕು ಎಂದು ಕೇಳಿದರೆ ಹಣ ಯುಪಿಐ ಮಾಡಿಬಿಡಿ ಎಂದುಬಿಡುತ್ತೀವಿ.

ಯುಪಿಐ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಹೋಗಿದೆ. ಈ ಹಿಂದೆ ಬರೀ ದೊಡ್ಡ ದೊಡ್ಡ ಅಂಗಡಿಗಳಲ್ಲಿ ಮಾತ್ರ ಆನ್‌ಲೈನ್‌ ಪೇಮೆಂಟ್‌ ವ್ಯವಸ್ಥೆ ಇತ್ತು. ಆದರೆ ಇದೀಗ ನೆಟ್‌ವರ್ಕ್‌ ಇರುವ ಯಾವುದೇ ಪ್ರದೇಶದಲ್ಲಿ ಯುಪಿಐ ರಾರಾಜಿಸುತ್ತಿದೆ. ದೊಡ್ಡ ಅಂಗಡಿಯಿಂದ ಸಣ್ಣ ಗಾಡಿಯವರೆಗೂ ಸ್ಕಾನರ್‌ ಎದ್ದು ಕಾಣಿಸುತ್ತದೆ. ಅಷ್ಟೇ ಯಾಕೆ ದೇವಸ್ಥಾನಗಳಲ್ಲಿ ಇ-ಹುಂಡಿಯಿದೆ. ತರಕಾರಿ ಮಾರುವ ಅಜ್ಜಿಯ ಕೈಯಲ್ಲೂ, ಗೋಲ್‌ಗಪ್ಪಾ ಮಾರುವ ಭಯ್ಯಾನ ಕೈಯಲ್ಲೂ ಸ್ಕಾನರ್‌ ಇದ್ದೇ ಇದೆ. ಭಿಕ್ಷುಕರ ಬಳಿಯೂ ಯುಪಿಐ ಪಾವತಿ ವ್ಯವಸ್ಥೆ ಇದೆ ಅನ್ನೋದನ್ನು ಮರೆಯುವಂತಿಲ್ಲ.

ಯುಪಿಐ ಡಿಜಿಟಲ್‌ ಕ್ರಾಂತಿ ಆರಂಭವಾಗಿ ಇಂದಿಗೆ ಹತ್ತು ವರ್ಷ! ಯುಪಿಐ ಬಗ್ಗೆ ಪ್ರಮುಖ ಮಾಹಿತಿ ಇಲ್ಲಿದೆ..

ಯುಪಿಐ ಅಂದರೆ ಯುನಿಫೈಡ್‌ ಪೇಮೆಂಟ್ಸ್‌ ಇಂಟರ್ಫೇಸ್‌ ಎಂದರ್ಥ. ಸ್ಮಾರ್ಟ್‌ಫೋನ್‌ ಮೂಲಕ ಬ್ಯಾಂಕ್‌ ಖಾತೆಗಳ ನಡುವೆ ಕ್ಷಣಕ್ಕೆ ಹಣ ಕಳುಹಿಸಲು ಹಾಗೂ ಹಣವನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ ಯುಪಿಐನ್ನು ಅಭಿವೃದ್ಧಿಪಡಿಸಿದೆ.

ಬ್ಯಾಂಕ್‌ ರೀತಿ ವಾರಕ್ಕೊಂದು ದಿನ ರಜೆ ಇಲ್ಲದೇ, ವರ್ಕಿಂಗ್‌ ಅವರ್ಸ್‌ ಇಲ್ಲದೆ ದಿನದ ಇಪ್ಪತ್ನಾಲ್ಕು ತಾಸೂ ಆಕ್ಟೀವ್‌ ಆಗಿರುತ್ತದೆ. ಮಧ್ಯರಾತ್ರಿ ನೆಂಟರಿಷ್ಟರು ಕರೆ ಮಾಡಿ ಎಮರ್ಜೆನ್ಸಿ ಎಂದರೆ ಆ ಕ್ಷಣವೇ ನೀವು ಅವರಿಗೆ ಹಣ ಕಳುಹಿಸಬಹುದಾಗಿದೆ. ಒಂದೇ ಒಂದು ಯುಪಿಐ ಅಪ್ಲಿಕೇಷನ್‌ ಮೂಲಕ ಮೂರ್ನಾಲ್ಕು ಬ್ಯಾಂಕ್‌ ಅಕೌಂಟ್‌ನ್ನು ಲಿಂಕ್‌ ಮಾಡುವ ಅವಕಾಶ ಇದೆ.

ಇನ್ನು ಬೇರೆ ದೇಶಗಳಿಂದ ಭಾರತಕ್ಕೆ ಬಂದವರು ಕೂಡ ಯುಪಿಐ ವ್ಯವಸ್ಥೆ ನೋಡಿ ಭೇಷ್‌ ಎನ್ನುತ್ತಾರೆ. ಒಂದೇ ಕ್ಷಣದಲ್ಲಿ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಹಣ ಕಳಿಸಬಹುದಾದ, ಸ್ವೀಕರಿಸಬಹುದಾಗ ಅಪ್ಲಿಕೇಷನ್‌ನನ್ನು ಅವರು ಮ್ಯಾಜಿಕ್‌ ರೀತಿ ಕಾಣುತ್ತಾರೆ.

ಇನ್ನು ತಾಂತ್ರಿಕ ದೋಷದಿಂದ ಯುಪಿಐನಲ್ಲಿ ಹಣ ಕಟ್‌ ಆಯ್ತು. ಆದರೆ ಬೇರೆಯವರ ಖಾತೆಗೆ ಹಣ ಹೋಗಿಲ್ಲ ಎಂದು ಗಾಬರಿಯಾಗಬೇಡಿ. ಸ್ವಲ್ಪ ಸಮಯ ನೀಡಿದರೆ ಹಣ ನಿಮ್ಮ ಖಾತೆಗೆ ಇಲ್ಲ ಯಾರಿಗೆ ಹಣ ಕಳಿಸಿದ್ದೀರೋ ಅವರ ಖಾತೆಗೆ ಬಂದು ಬೀಳುತ್ತದೆ. ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಒಂದು ಗಂಟೆ ಕಾಯುವುದು ಸೂಕ್ತವಾಗಿದೆ. ನಿಮ್ಮ ಪಾಸ್‌ವರ್ಡ್‌ ನಿಮ್ಮ ಬಳಿಯೇ ಇದ್ದರೆ ಖಾತೆಯಲ್ಲಿರುವ ಹಣ ಸದಾ ಸುರಕ್ಷಿತವಾಗಿಯೇ ಇರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !