ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳದ ರಸುವಾ ಜಿಲ್ಲೆಯಲ್ಲಿ ಕಾಣಿಸಿರುವ ಪ್ರಳಯಸದೃಶ ಹಠಾತ್ ಪ್ರವಾಹಕ್ಕೆ ಕಾರಣವಾದ ಅಂಶಗಳ ಬಗ್ಗೆ ಮಹತ್ವದ ಸುಳಿವು ಸಿಕ್ಕಿದೆ.
ಉಪಗ್ರಹ ಚಿತ್ರಗಳ ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ, ಭಾರಿ ಪ್ರಮಾಣದ ಹಿಮ ಮತ್ತು ಬಂಡೆಗಳ ಕುಸಿತವೇ ನದಿಗೆ ಏಕಾಏಕಿ ಅಪಾರ ಪ್ರಮಾಣದ ನೀರು ಮತ್ತು ಅವಶೇಷ ಹರಿಯಲು ಕಾರಣ ಎಂದು ಅಂದಾಜಿಸಲಾಗಿದೆ.
ಘಟನೆಯ ಬಗ್ಗೆ ‘ಪ್ಲಾನೆಟ್ ಲ್ಯಾಬ್’ ಉಪಗ್ರಹ ದಾಖಲಿಸಿದ ಅಂಶಗಳನ್ನು ಉಲ್ಲೇಖಿಸಿರುವ ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ, ಟಿಬೆಟ್ ಭಾಗದಲ್ಲಿ ಸಂಭವಿಸಿದ ಐಸ್-ರಾಕ್ ಅವಲಾಂಚ್ ಅಥವಾ ಹಿಮ-ಬಂಡೆಗಳ ಭಾರಿ ಕುಸಿತದ ಗುರುತುಗಳನ್ನು ಉಪಗ್ರಹ ಚಿತ್ರಗಳು ತೋರಿಸುತ್ತವೆ ಎಂದು ತಿಳಿಸಿದೆ.
ಬುಧವಾರ ಏನಾಯಿತು?
ಬುಧವಾರ ನೇಪಾಳ-ಟಿಬೆಟ್ ಗಡಿ ಸಮೀಪದ ರಸುವಾ ಜಿಲ್ಲೆಯಲ್ಲಿ ಭೋಟೆ ಕೋಶಿ ನದಿಯಲ್ಲಿ ಏಕಾಏಕಿ ಭಾರಿ ಪ್ರಮಾಣದ ನೀರಿನ ಹರಿವು ಕಾಣಿಸಿಕೊಂಡಿತು. ಪ್ರವಾಹದ ರಭಸಕ್ಕೆ ಮನೆಗಳು, ಸೇತುವೆಗಳು, ರಸ್ತೆಗಳು ಹಾಗೂ ವಿವಿಧ ಮೂಲಸೌಕರ್ಯಗಳು ಕ್ಷಣಾರ್ಧದಲ್ಲಿ ಹಾನಿಗೊಳಗಾದವು. ಟಿಬೆಟ್‌ನ ಗೈರಾಂಗ್ ಬಂದರು ಪ್ರದೇಶದಲ್ಲಿಯೂ ಭಾರಿ ನೀರು ಮತ್ತು ಕೆಸರು ನುಗ್ಗಿದ ದೃಶ್ಯಗಳು ಕಂಡುಬಂದವು. ಅದಾದ ಬಳಿಕ ಪ್ರವಾಹ ನೇಪಾಳದ ರಸುವಾ ಭಾಗಕ್ಕೂ ತಲುಪಿದೆ.
ಹಿಮಕುಸಿತವೇ? ಗ್ಲೇಶಿಯಲ್ ಸರೋವರ ಸ್ಫೋಟವೇ?
ಆರಂಭಿಕ ಅಧ್ಯಯನ ಮಾಹಿತಿಗಳು ಹಿಮ-ಬಂಡೆಗಳ ಕುಸಿತವನ್ನೇ ಬೊಟ್ಟುಮಾಡುತ್ತಿವೆ. ಮತ್ತೊಂದೆಡೆ, ಮೇಲ್ಭಾಗದಲ್ಲಿರುವ ಹಿಮನದಿ ಸರೋವರದಿಂದ ಏಕಾಏಕಿ ನೀರು ಬಿಡುಗಡೆಯಾದ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಇದು ಸಾಮಾನ್ಯ ಮಳೆಯಿಂದ ಉಂಟಾದ ಪ್ರವಾಹಕ್ಕಿಂತ ಭಿನ್ನವಾದ ಘಟನೆಯಾಗಿದ್ದು, ಹೀಗಾಗಿ ಭಾರಿ ಕುತೂಹಲ ಮುಡಿಸಿದೆ.
ಇದನ್ನೂ ಓದಿ:
ಉಪಗ್ರಹ ಚಿತ್ರಗಳು ಏನು ಹೇಳುತ್ತವೆ?
ಪ್ಲಾನೆಟ್ ಲ್ಯಾಬ್ ಉಪಗ್ರಹ ಚಿತ್ರಗಳಲ್ಲಿನ ಪ್ರವಾಹಕ್ಕೂ ಮುನ್ನ ಮತ್ತು ನಂತರದ ಭೂಪ್ರದೇಶದ ಬದಲಾವಣೆಗಳನ್ನು ಪರಿಶೀಲಿಸಲಾಗಿದೆ. ಇದರಿಂದ ಮೇಲ್ಭಾಗದಲ್ಲಿ ದೊಡ್ಡ ಪ್ರಮಾಣದ ಹಿಮ-ಬಂಡೆಗಳ ಚಲನೆ ಸಂಭವಿಸಿರುವ ಸಾಧ್ಯತೆಯ ಸುಳಿವು ಸಿಕ್ಕಿದೆ. ಇದು ಘಟನೆಯ ಪ್ರಮುಖ ಸಾಕ್ಷ್ಯವಾಗಿದ್ದರೂ, ಸ್ಪಷ್ಟ ಚಿತ್ರಣಕ್ಕಾಗಿ ಸ್ಥಳ ಪರಿಶೀಲನೆ ಮತ್ತು ಹೆಚ್ಚಿನ ವೈಜ್ಞಾನಿಕ ವಿಶ್ಲೇಷಣೆ ಅಗತ್ಯವಿದೆ.



