ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಕ್ಸ್ಪೈರಿ ಡೇಟ್ ಆಗಿರುವ ಬಿಸ್ಕೆಟ್ಗಳನ್ನು ನೀವೇ ತಿನ್ನಿ ಎಂದು ಅಧಿಕಾರಿಯ ಬಾಯಿಗೆ ಬಿಸ್ಕೆಟ್ ತುರುಕಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ವಿಜಾಪುರದಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಆಹಾರ ಮತ್ತು ಔಷಧ ಆಡಳಿತ ಅಧಿಕಾರಿಯೊಬ್ಬರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳೀಯ ಪಾನ್ ಅಂಗಡಿಯಲ್ಲಿ ಅವಧಿ ಮೀರಿದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಹೇಳಲಾಗಿತ್ತು. ಇದನ್ನು ಪರೀಕ್ಷಿಸಲು ಎಫ್ಡಿಎ ಅಧಿಕಾರಿಗಳು ಆಗಮಿಸಿದ್ದರು.
ಈ ವೇಳೆ ಅಂಗಡಿ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅವರಿಂದ ಲಂಚ ಪಡೆದು ಅಧಿಕಾರಿ ಸುಮ್ಮನೆ ಹೋಗುತ್ತಿದ್ದರು ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಸಾರ್ವಜನಿಕರು ತಮ್ಮ ಜೀವದ ಜೊತೆ ಚೆಲ್ಲಾಟ ಆಡುತ್ತೀರೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಗಡಿಯಲ್ಲಿದ್ದ ಎಕ್ಸ್ಪೈರಿ ಡೇಟ್ ಆಗಿರುವ ಬಿಸ್ಕೆಟ್ ಪ್ಯಾಕ್ ತೆಗೆದುಕೊಂಡು ಅದನ್ನು ಅಧಿಕಾರಿಯ ಬಾಯಿಗೆ ತುರುಕಿದ್ದಾರೆ.
ಈ ಪ್ರಕರಣದ ಹಿನ್ನೆಲೆ ಸ್ಥಳೀಯ ಪಾನ್ ಅಂಗಡಿಯಲ್ಲಿ ಅವಧಿ ಮೀರಿದ ಆಹಾರ ಉತ್ಪನ್ನಗಳ ಮಾರಾಟದ ಆರೋಪವಾಗಿದೆ. ಇದೇ ಸಂದರ್ಭದಲ್ಲಿ, ಅವಧಿ ಮೀರಿದ ಆಹಾರ ಸೇವಿಸಿದ ಬಳಿಕ ಎರಡು ವರ್ಷದ ಮಗು ಅಸ್ವಸ್ಥಗೊಂಡಿತ್ತು ಎಂಬ ಆರೋಪವೂ ಸ್ಥಳೀಯರಿಂದ ಕೇಳಿಬಂದಿದೆ. ಇದರಿಂದ ಸ್ಥಳೀಯರು ಸಿಟ್ಟಿಗೆದ್ದಿದ್ದು, ಲಂಚ ತೆಗೆದುಕೊಂಡು ಮಾಡಬೇಕಾದ ಕೆಲಸ ಮಾಡದೇ ಹೋಗುತ್ತೀರಿ ಎಂದು ಬಿಸ್ಕೆಟ್ ತಿನ್ನಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಲಂಚ ಪಡೆಯುವ ಅಧಿಕಾರಿಗಳಿಗೆ ಹೀಗೇ ಮಾಡಬೇಕು ಎಂದು ಹಲವರು ಕಮೆಂಟ್ ಮಾಡಿದ್ದರೆ, ಪ್ರೂಫ್ ಇಲ್ಲದೇ ಒಬ್ಬ ಅಧಿಕಾರಿಯನ್ನು ಹೀಗೆ ನಡೆಸಿಕೊಳ್ಳಬಾರದಿತ್ತು ಎಂದು ಹಲವರು ಹೇಳಿದ್ದಾರೆ.



