ಹೊಸದಿಗಂತ ವರದಿ ರಾಮನಗರ:
ಕೇಂದ್ರ ಸಚಿವ ಕುಮಾರಸ್ವಾಮಿಯವರು ರಾಮನಗರಕ್ಕೆ ಬಂದರೆ ಕಾಲು ತೊಳೆದು ಸ್ವಾಗತ ಮಾಡುತ್ತೇನೆ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಬಂದರೆ ಸಂತೋಷದಿಂದ ಸ್ವಾಗತಿಸುತ್ತೇವೆ. ಒಂದು ವೇಳೆ ರಾಮನಗರಕ್ಕೆ ಬಂದರೆ ಅವರ ಪಾದ ತೊಳೆದು ಸ್ವಾಗತ ಮಾಡುತ್ತೇವೆ ಎಂದರು.
ನೈಸ್ ರಸ್ತೆ ವಿಚಾರವಾಗಿ ಹೋರಾಟ ನಡೆಸಲು ಮುಂದಾಗಿರುವ ಜೆಡಿಎಸ್ ವಿರುದ್ಧ ಕಿಡಿಕಾರಿದ ಅವರು, ಕುಮಾರಸ್ವಾಮಿಯವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅವರು ರಾಜ್ಯದ ಪರವಾಗಿ ಕೆಲಸ ಮಾಡಬೇಕು ಹಾಗೂ ರಾಮನಗರದ ಜನತೆಯ ಋಣ ತೀರಿಸುವ ಕೆಲಸ ಮಾಡಬೇಕು. ರಾಮನಗರ ಭಾಗಕ್ಕೆ ಬೃಹತ್ ಕೈಗಾರಿಕೆಗಳನ್ನು ತಂದು ಇಲ್ಲಿನ ಯುವಕರಿಗೆ ಉದ್ಯೋಗ ನೀಡುವ ಆಲೋಚನೆ ಮಾಡಬೇಕು. ಆದರೆ ಅವರಿಗೆ ಇಂತಹ ಅಭಿವೃದ್ಧಿ ಆಲೋಚನೆಗಳೇ ಇಲ್ಲದೆ, ಕೇವಲ ಬಿಡದಿ ಹಾಗೂ ನೈಸ್ ರಸ್ತೆ ವಿಚಾರದಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದರು.
ಮಾಜಿ ಸಚಿವ ನಾಗೇಂದ್ರ ರಾಜೀನಾಮೆ ವಿಚಾರವಾಗಿ, ವಿರೋಧ ಪಕ್ಷಕ್ಕೆ ಸರ್ಕಾರದ ವಿರುದ್ಧ ಹೋರಾಡಲು ಬೇರೆ ಯಾವುದೇ ಅಸ್ತ್ರಗಳಿಲ್ಲ. ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದಕ್ಕೆ ಮತ್ತು ಬಿಜೆಪಿಯವರ ವರ್ತನೆಯಿಂದ ಮನಸ್ಸಿಗೆ ನೋವಾಗಿ ನಾಗೇಂದ್ರ ಅವರು ರಾಜೀನಾಮೆ ನೀಡಿದ್ದಾರೆ. ತಮ್ಮಿಂದ ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದಾರೆಯೇ ಹೊರತು, ಅವರ ಮೇಲಿನ ಆರೋಪ ಸಾಬೀತಾಗಿ ಅಲ್ಲ. ಈಗಾಗಲೇ ನಾಗೇಂದ್ರ ಅವರಿಗೆ ಎಸ್ಐಟಿ ಕ್ಲೀನ್ ಚಿಟ್ ನೀಡಿದೆ. ಬಿಜೆಪಿ ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದರು.
ಇದನ್ನೂ ಓದಿ:
ದೇಣಿಗೆ ಲೂಟಿ ಬಗ್ಗೆ ಬಿಜೆಪಿ ಯಾಕೆ ಮಾತನಾಡಲ್ಲ?
ರಾಮಮಂದಿರ ನಿರ್ಮಾಣಕ್ಕಾಗಿ ರಾಮನ ಭಕ್ತರು ನೀಡಿದ ದೇಣಿಗೆ ಲೂಟಿಯಾಗಿದೆ. ಅದರ ಬಗ್ಗೆ ಬಿಜೆಪಿ ನಾಯಕರು ಏಕೆ ಚರ್ಚೆ ಮಾಡುತ್ತಿಲ್ಲ? ಕೇಂದ್ರದಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ನೀವೇ ಅಧಿಕಾರದಲ್ಲಿದ್ದೀರಿ. ರಾಮನ ಹಣ ಲೂಟಿಯಾದಾಗ ಏನು ಮಾಡ್ತಿದ್ರಿ? ಅದು ಹಗರಣ ಅಲ್ವಾ? ವಿಪಕ್ಷಗಳಿಗೆ ಜನರ ಬಗ್ಗೆ, ರೈತರ ಬಗ್ಗೆ ಯೋಚನೆ ಇಲ್ಲ. ಸರ್ಕಾರಕ್ಕೆ ಕೆಟ್ಟ ಹೆಸರು ತರುವುದೇ ಅವರ ಮುಖ್ಯ ಉದ್ದೇಶವಾಗಿದೆ ಎಂದರು.



