September 2, 2026
Wednesday, September 2, 2026
spot_img

ತಮ್ಮನ ಆಡಳಿತ ನೋಡಿ ಹೆಮ್ಮೆ ಆಗ್ತಿದೆ: ಡೆಪ್ಯುಟಿ ಸಿಎಂ ಪವನ್ ಕಲ್ಯಾಣ್‌ಗೆ ಬರ್ತ್‌ಡೇ ವಿಶ್‌ ಮಾಡಿದ ಚಿರಂಜೀವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ಅವರ ಜನ್ಮದಿನದ ಅಂಗವಾಗಿ ಅವರ ಅಣ್ಣ, ಮೆಗಾಸ್ಟಾರ್ ಚಿರಂಜೀವಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೃದಯಸ್ಪರ್ಶಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮನ ಜನಪರ ಕಾಳಜಿ ಮತ್ತು ಆಡಳಿತ ಶೈಲಿಯನ್ನು ನೋಡಿ ಒಬ್ಬ ಅಣ್ಣನಾಗಿ ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಬಾಲ್ಯದಿಂದಲೇ ಕಂಡ ಪ್ರಾಮಾಣಿಕತೆ

ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಚಿರಂಜೀವಿ, ನಿಷ್ಕಲ್ಮಶ ಪ್ರೀತಿ, ಜವಾಬ್ದಾರಿ ಮತ್ತು ಪ್ರತಿ ಕ್ಷಣವೂ ಜನರಿಗೆ ಒಳ್ಳೆಯದನ್ನು ಮಾಡಬೇಕೆಂಬ ಶುದ್ಧ ಮನಸ್ಸು ಕಲ್ಯಾಣ್ ಬಾಬುನಲ್ಲಿ ಬಾಲ್ಯದಿಂದಲೇ ಇದೆ. ಕೈಗೆತ್ತಿಕೊಳ್ಳುವ ಪ್ರತಿಯೊಂದು ಕೆಲಸದಲ್ಲೂ ಅವರು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ. ಹತ್ತು ಜನರಿಗೆ ಒಳ್ಳೆಯದಾಗಬೇಕು ಎಂಬ ಹಂಬಲ ಅವರ ಪ್ರತಿ ಹೆಜ್ಜೆಯಲ್ಲೂ ಎದ್ದು ಕಾಣುತ್ತದೆ ಎಂದು ಚಿರಂಜೀವಿ ತಿಳಿಸಿದ್ದಾರೆ.

ಆಡಳಿತದಲ್ಲಿ ಹೊಸ ಚಾಪು

ಪವನ್ ಕಲ್ಯಾಣ್ ಅವರು ಉಪಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಕೈಗೊಂಡ ನಿರ್ಧಾರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಚಿರಂಜೀವಿ, ನಮ್ಮ ಕುಟುಂಬದ ಮೇಲೆ ಅವರು ಎಷ್ಟು ಪ್ರೀತಿ ಇಟ್ಟಿದ್ದಾರೋ, ಅದೇ ಪ್ರೀತಿ ಮತ್ತು ಮಮತೆಯನ್ನು ತಮ್ಮನ್ನು ನಂಬಿದ ಜನರ ಮೇಲೂ ತೋರಿಸುತ್ತಿದ್ದಾರೆ. ಹಳ್ಳಿಗಳ ಅಭಿವೃದ್ಧಿ, ಬುಡಕಟ್ಟು ಪ್ರದೇಶಗಳ ಉದ್ಧಾರ, ಪರಿಸರ ಸಂರಕ್ಷಣೆ ಮತ್ತು ಜನರ ಮೂಲಭೂತ ಅಗತ್ಯಗಳನ್ನು ಪೂರೈಸುವಲ್ಲಿ ಅವರು ಆಡಳಿತದಲ್ಲಿ ತಮ್ಮದೇ ಆದ ವಿಶಿಷ್ಟ ಮುದ್ರೆಯನ್ನು ಒತ್ತುತ್ತಿದ್ದಾರೆ ಎಂದಿದ್ದಾರೆ.

ಪಿಠಾಪುರಂ ಜನತೆಗೆ ಕುಟುಂಬದ ಸದಸ್ಯ

ವರ್ಷಗಳಿಂದ ಬಗೆಹರಿಯದೆ ಉಳಿದಿದ್ದ ಎಷ್ಟೋ ಸಮಸ್ಯೆಗಳಿಗೆ ಕಾಯಂ ಪರಿಹಾರ ಕಂಡುಕೊಳ್ಳುತ್ತಾ, ತೀರಾ ಹಿಂದುಳಿದ ಪ್ರದೇಶಗಳಿಗೂ ಅಭಿವೃದ್ಧಿ ತಲುಪಿಸುತ್ತಿರುವುದು ನನಗೆ ಅಪಾರ ಸಂತೋಷ ತಂದಿದೆ. ತಮಗೆ ಜಯ ತಂದುಕೊಟ್ಟ ಪಿಠಾಪುರಂ ಕ್ಷೇತ್ರದ ಜನತೆಗೆ ಅವರು ಕೇವಲ ಒಬ್ಬ ಜನಪ್ರತಿನಿಧಿಯಾಗಿ ಮಾತ್ರವಲ್ಲದೆ, ಅವರದೇ ಕುಟುಂಬದ ಒಬ್ಬ ಸದಸ್ಯನಂತೆ ಬೆಂಬಲವಾಗಿ ನಿಂತಿದ್ದಾರೆ ಎಂದು ಚಿರಂಜೀವಿ ಹೇಳಿದ್ದಾರೆ.

ಇದನ್ನೂ ಓದಿ:

ಜನತೆ ಹೆಮ್ಮೆ ಪಡುವ ನಾಯಕರಾಗಲಿ

ಜನರ ಕಷ್ಟಗಳನ್ನು ತಮ್ಮದೇ ಕಷ್ಟವೆಂದು ಭಾವಿಸುವ ಕಲ್ಯಾಣ್ ಬಾಬು ಅವರು ಇಡೀ ತೆಲುಗು ಜನತೆ ಹೆಮ್ಮೆ ಪಡುವ ನಾಯಕರಾಗಿ ಬೆಳೆಯಲಿ ಎಂದು ಹಾರೈಸಿರುವ ಮೆಗಾಸ್ಟಾರ್, ಅವರು ನೂರು ವರ್ಷಗಳ ಕಾಲ ಆಯುರಾರೋಗ್ಯ ಮತ್ತು ಸದಾ ಉತ್ಸಾಹದಿಂದ ಇರಲಿ. ಮತ್ತಷ್ಟು ಶಕ್ತಿಯೊಂದಿಗೆ ಜನಸೇವೆಯಲ್ಲಿ ತೊಡಗಿಸಿಕೊಳ್ಳಲಿ ಎಂದು ನಮ್ಮ ಮನೆದೇವರಾದ ಭಗವಾನ್ ಅಂಜನೇಯ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ತಮ್ಮ ಹಾರೈಕೆಯನ್ನು ತಿಳಿಸಿದ್ದಾರೆ.

ಅಣ್ಣ-ತಮ್ಮಂದಿರ ನಡುವಿನ ಪ್ರೀತಿ ಹಾಗೂ ಗೌರವವನ್ನು ತೋರಿಸಿಕೊಡುವ ಚಿರಂಜೀವಿ ಅವರ ಈ ಪೋಸ್ಟ್ ಸದ್ಯ ಅಭಿಮಾನಿಗಳ ಹೃದಯ ಗೆದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !