ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ದಸರಾದಲ್ಲಿ ಅಭಿಮನ್ಯು ಆನೆ ನಿಶಾನೆ ಆನೆಯಾಗಿ ಭಾಗವಹಿಸಲಿದೆ ಎಂದು ಅರಣ್ಯ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಆದೇಶ ನೀಡಿದ್ದಾರೆ.
ಈಗಾಗಲೇ ಆರು ಬಾರಿ ಅಂಬಾರಿ ಹೊತ್ತಿದ್ದ ಅಭಿಮನ್ಯು 25 ವರ್ಷ ದಸರಾದಲ್ಲಿ ಭಾಗಿಯಾಗಿದೆ. ಈ ಬಾರಿ ಆನೆಯ ವಯಸ್ಸನ್ನು ಪರಿಗಣಿಸಿ ದಸರಾ ಆನೆಗಳ ಪಟ್ಟಿಯಿಂದ ಕೈಬಿಡಲಾಗಿತ್ತು. ಅಭಿಮನ್ಯು ಅಭಿಮಾನಿಗಳು ದಸರಾ ಜಂಬೂಸವಾರಿಗೆ ಅಭಿಮನ್ಯುಗೆ ಅವಕಾಶ ಕೊಡಿ ಎಂದು ಒತ್ತಾಯಿಸಿದ್ದರು.
ಮೈಸೂರು ದಸರಾ ಕರ್ನಾಟಕದ ನಾಡಹಬ್ಬವಾಗಿದ್ದು, ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ವೈಭವವನ್ನು ವಿಶ್ವದಾದ್ಯಂತ ಸಾರುವ ಐತಿಹಾಸಿಕ ಉತ್ಸವವಾಗಿದೆ. ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಉತ್ಸವದಲ್ಲಿ ದಸರಾ ಗಜಪಡೆಯ ಆನೆಗಳು ವರ್ಷಗಳಿಂದಲೂ ಪ್ರಮುಖ ಪಾತ್ರ ವಹಿಸುತ್ತಾ ಬಂದಿವೆ. ಈ ಮಹತ್ವದ ದಸರಾ ಪರಂಪರೆಯಲ್ಲಿ ಅಭಿಮನ್ಯು ಆನೆಯ ಸೇವೆ ಅತ್ಯಂತ ವಿಶೇಷ ಹಾಗೂ ಸ್ಮರಣೀಯವಾಗಿದೆ.
ಹಲವು ವರ್ಷಗಳ ಕಾಲ ದಸರಾ ಮಹೋತ್ಸವದಲ್ಲಿ ಭಾಗವಹಿಸಿ, ಅಂಬಾರಿ ಹೊರುವ ಜವಾಬ್ದಾರಿಯನ್ನು ಅತ್ಯಂತ ಶಿಸ್ತು, ಧೈರ್ಯ ಹಾಗೂ ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಅಭಿಮನ್ಯು ಆನೆ ನಾಡಿನ ಜನರ ಪ್ರೀತಿ ಮತ್ತು ಗೌರವಕ್ಕೆ ಪಾತ್ರವಾಗಿದೆ.
ಅಭಿಮನ್ಯುವಿನ ದೀರ್ಘಕಾಲದ ಅಮೂಲ್ಯ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಇತ್ತೀಚೆಗೆ ಆಯೋಜಿಸಲಾದ ಅಭಿಮನ್ಯು ಆನೆಯ ಬೀಳ್ಕೊಡುಗೆ/ಗೌರವ ಸಮಾರಂಭವು ಅತ್ಯಂತ ಯಶಸ್ವಿಯಾಗಿ ಹಾಗೂ ಅಚ್ಚುಕಟ್ಟಾಗಿ ನೆರವೇರಿದ್ದು, ಸಾರ್ವಜನಿಕರು ಹಾಗೂ ದಸರಾ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಕಾರ್ಯಕ್ರಮವು ಅಭಿಮನ್ಯುವಿನ ಸೇವೆಗೆ ಸಲ್ಲಿಸಿದ ಗೌರವದ ಪ್ರತೀಕವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.



