ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಇತ್ತ ಯುವಕರ ನೆಚ್ಚಿನ ‘ಯುವ ದಸರಾ’ ವೇದಿಕೆ ಕೂಡ ಭರ್ಜರಿಯಾಗಿ ರಂಗೇರಲು ಸಜ್ಜಾಗುತ್ತಿದೆ. ಈ ಬಾರಿಯ ಯುವ ದಸರಾ ಉತ್ಸವವನ್ನು ನೃತ್ಯ ಮಾಂತ್ರಿಕ, ಬಹುಭಾಷಾ ನಟ ಪ್ರಭುದೇವ ಉದ್ಘಾಟಿಸಲಿದ್ದಾರೆ.
ಯುವ ದಸರಾ ಉಪಸಮಿತಿಯ ಕಾರ್ಯಾಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿಗಳಾದ ಅರುಣ್ ಹಾಗೂ ಸತ್ಯಮೂರ್ತಿ ಒಳಗೊಂಡ ಉನ್ನತ ಮಟ್ಟದ ನಿಯೋಗವು ಚೆನ್ನೈನಲ್ಲಿರುವ ಪ್ರಭುದೇವ ಅವರ ನಿವಾಸಕ್ಕೆ ಖುದ್ದು ಭೇಟಿ ನೀಡಿ ಆಹ್ವಾನಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಭುದೇವ ಅವರಿಗೆ ಮೈಸೂರು ಸಂಸ್ಥಾನದ ಸಾಂಪ್ರದಾಯಿಕ ಶೈಲಿಯಲ್ಲಿ ಭವ್ಯ ಪೇಟಾ ತೊಡಿಸಿ, ರೇಷ್ಮೆ ಶಾಲು ಹೊದಿಸಿ ಸತ್ಕರಿಸಲಾಯಿತು.
ಹೆಚ್ಚಿದ ಕುತೂಹಲ
ಪ್ರಭುದೇವ ಅವರ ವಿಶಿಷ್ಟ ನೃತ್ಯ ಶೈಲಿ ಮತ್ತು ವೇದಿಕೆ ಪ್ರದರ್ಶನ ಯುವಜನತೆಯಲ್ಲಿ ಅಪಾರ ಕ್ರೇಜ್ ಹೊಂದಿದ್ದು, ಅವರ ಉಪಸ್ಥಿತಿಯು ಈ ಬಾರಿಯ ಯುವ ದಸರಾ ವೇದಿಕೆಗೆ ಅಂತಾರಾಷ್ಟ್ರೀಯ ಮಟ್ಟದ ಮೆರುಗು ನೀಡುವ ನಿರೀಕ್ಷೆಯಿದೆ.
ಇದನ್ನೂ ಓದಿ:
ಈ ಬಾರಿಯ ಮುಖ್ಯ ದಸರಾ ಮಹೋತ್ಸವದ ಉದ್ಘಾಟನೆಯು ಅಕ್ಟೋಬರ್ 11 ರಂದು ನೆರವೇರಲಿದೆ. ಪ್ರಭುದೇವ ಅವರು ಆಹ್ವಾನವನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರಾದರೂ, ಯುವ ದಸರಾದ ನಿಖರ ದಿನಾಂಕಗಳು, ಸಂಪೂರ್ಣ ವೇಳಾಪಟ್ಟಿ ಮತ್ತು ಈ ಬಾರಿ ಕಾರ್ಯಕ್ರಮ ನಡೆಯಲಿರುವ ಹೊಸ ವೇದಿಕೆಯ ವಿವರಗಳನ್ನು ಮೈಸೂರು ಜಿಲ್ಲಾಡಳಿತ ಶೀಘ್ರದಲ್ಲೇ ಪ್ರಕಟಿಸಲಿದೆ. ಸಂಗೀತ, ನೃತ್ಯ ಮತ್ತು ಯುವ ಉಲ್ಲಾಸದ ಮಹಾಸಂಗಮವಾಗಿರುವ ಯುವ ದಸರಾಕ್ಕೆ ಪ್ರಭುದೇವ ಅವರಂತಹ ದಿಗ್ಗಜ ಕಲಾವಿದರು ಉದ್ಘಾಟಕರಾಗಿ ಬರುತ್ತಿರುವುದು ಸಾಂಸ್ಕೃತಿಕ ನಗರಿಯ ಜನರಲ್ಲಿ ಇನ್ನಷ್ಟು ಭಾರೀ ಕುತೂಹಲ ಉಂಟುಮಾಡಿದೆ



