September 4, 2026
Friday, September 4, 2026
spot_img

ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ: 41 ಸಾಧಕರಿಗೆ ಗೌರವ, ನಾಳೆ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಮಾರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸೆಪ್ಟೆಂಬರ್ 5 ರ ‘ಶಿಕ್ಷಕರ ದಿನಾಚರಣೆ’ಯ ಮಹತ್ವದ ಸಂದರ್ಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2026-27ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಕಟಿಸಿದೆ. ರಾಜ್ಯಾದ್ಯಂತ ಇರುವ ಒಟ್ಟು 41 ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ (PU) ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು ಮತ್ತು ಪ್ರಾಂಶುಪಾಲರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ ಭಾರತದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ನೆನಪಿನಲ್ಲಿ, ಆಯ್ಕೆಯಾಗಿರುವ ಮಹಿಳಾ ಶಿಕ್ಷಕಿಯರಿಗೆ ‘ಸಾವಿತ್ರಿಬಾಯಿ ಫುಲೆ’ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದು ಈ ಬಾರಿಯ ವಿಶೇಷವಾಗಿದೆ.

ಅತ್ಯುತ್ತಮ ಶಾಲೆಗಳಿಗೂ ಪ್ರಶಸ್ತಿ ಘೋಷಣೆ

ಇಲಾಖೆಯು ಇದೇ ಸಂದರ್ಭದಲ್ಲಿ 2026ನೇ ಸಾಲಿನ ಪ್ರಸಿದ್ಧ ‘ಮಲೆನಾಡ ಗಾಂಧಿ ಎಚ್.ಜಿ. ಗೋವಿಂದೇಗೌಡ ಅತ್ಯುತ್ತಮ ಶಾಲೆ’ ಪ್ರಶಸ್ತಿಯನ್ನೂ ಪ್ರಕಟಿಸಿದೆ. ಶಿರಸಿ ಶೈಕ್ಷಣಿಕ ಜಿಲ್ಲೆಯ ಹಳಿಯಾಳದ ‘ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ’ ಈ ಗೌರವಕ್ಕೆ ಪಾತ್ರವಾಗಿದೆ. ಅದೇ ರೀತಿ ಪ್ರೌಢಶಾಲೆ ವಿಭಾಗದಲ್ಲಿಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ‘ಕರಿಕಟ್ಟಿ ಸರ್ಕಾರಿ ಪ್ರೌಢಶಾಲೆ’ಯು ರಾಜ್ಯಮಟ್ಟದ ಅತ್ಯುತ್ತಮ ಶಾಲೆ ಪ್ರಶಸ್ತಿಗೆ ಆಯ್ಕೆಯಾಗಿದೆ.

ವಿಧಾನಸೌಧದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ

ನಾಳೆ ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಎಲ್ಲಾ ಸಾಧಕ ಶಿಕ್ಷಕರು ಹಾಗೂ ಶಾಲೆಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಿದ್ದಾರೆ.

ಇದನ್ನೂ ಓದಿ:

ಕರಾವಳಿ ಭಾಗದ ಇಬ್ಬರಿಗೆ ಪ್ರಶಸ್ತಿ

ಈ ವರ್ಷದ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಕರಾವಳಿ ಭಾಗದ ಇಬ್ಬರು ಸಾಧಕ ಶಿಕ್ಷಕರು ಭಾಜನರಾಗಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆಸಾಕುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಅಶೋಕ ಅವರು ರಾಜ್ಯಮಟ್ಟದ ಅತ್ಯುತ್ತಮ ಪ್ರಾಥಮಿಕ ಶಾಲಾ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅದೇ ರೀತಿ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೊಡಂಕಾಪು ಕಾರ್ಮೆಲ್ ಪ್ರೌಢಶಾಲೆಯ ದ್ವಿತೀಯ ದರ್ಜೆ ಸಹ ಶಿಕ್ಷಕ ರೋಷನ್ ಅಲೆಕ್ಸಾಂಡರ್ ಪಿಂಟೋ ಅವರು ರಾಜ್ಯಮಟ್ಟದ ಅತ್ಯುತ್ತಮ ಪ್ರೌಢಶಾಲಾ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !