ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡಿ ಲೋಕಸಭಾ ಕ್ಷೇತ್ರದ ಸಂಸದೆ ಮತ್ತು ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ತೀವ್ರವಾಗಿ ಆಕ್ರೋಶ ಹೊರಹಾಕಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಹಣವಿದ್ದರೂ ಕೆಲಸಗಳು ನನೆಗುದಿಗೆ ಬಿದ್ದಿರುವುದಕ್ಕೆ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
11 ಕೋಟಿಯಲ್ಲಿ ಖರ್ಚಾಗಿದ್ದು ಕೇವಲ 50 ಲಕ್ಷ
ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಮಂಡಿ ಕ್ಷೇತ್ರದ ಕೆಲಸಗಳಿಗಾಗಿ ಸುಮಾರು 11 ಕೋಟಿ ರೂಪಾಯಿ ಲಭ್ಯವಿದೆ. ಆದರೆ, ಅಧಿಕಾರಿಗಳು ಇದುವರೆಗೆ ಕೇವಲ 50 ಲಕ್ಷ ರೂಪಾಯಿಗಳನ್ನು ಮಾತ್ರವೇ ಬಳಸಿದ್ದಾರೆ ಎಂದು ಕಂಗನಾ ಸಭೆಯಲ್ಲಿ ತಿಳಿಸಿದ್ದಾರೆ.
ಅಧಿಕಾರಿಗಳ ಸುಳ್ಳು ಲೆಕ್ಕಕ್ಕೆ ಕ್ಲಾಸ್
ನನಗೆ ಈ ರೀತಿಯ ಸುಳ್ಳು ಭರವಸೆ ನೀಡಬೇಡಿ. ಈ ಹಿಂದಿನ ಸಭೆಗಳಲ್ಲಿ ಶೇ.90 ರಷ್ಟು ಹಣ ಬಳಕೆಯಾಗಿದೆ ಎಂದು ನನಗೆ ಸುಳ್ಳು ಲೆಕ್ಕ ನೀಡಲಾಗಿತ್ತು. ಆದರೆ ಈಗಿನ ವಾಸ್ತವವೇ ಬೇರೆಯಿದೆ ಎಂದು ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳನ್ನು ಕಂಗನಾ ತರಾಟೆಗೆ ತೆಗೆದುಕೊಂಡರು.
ನನಗಿಂತ ಚೆನ್ನಾಗಿ ನಟನೆ ಮಾಡ್ತಾರೆ
ಅಧಿಕಾರಿಗಳ ಆಲಸ್ಯತನದಿಂದಾಗಿ ಮಾಧ್ಯಮಗಳಲ್ಲಿ ತಮ್ಮ ಅಭಿನಯ ಮತ್ತು ಸಂಸದರ ಕಾರ್ಯವೈಖರಿಯ ಬಗ್ಗೆ ಅಪಹಾಸ್ಯ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಕಂಗನಾ, ʼನನಗಿಂತ ಚೆನ್ನಾಗಿ ಈ ಅಧಿಕಾರಿಗಳೇ ನಟನೆ ಮಾಡುತ್ತಾರೆʼ ಎಂದು ವ್ಯಂಗ್ಯವಾಡಿದರು.
ಅಸಭ್ಯಪದಗಳ ಬಳಕೆ
ಸಭೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ತೀವ್ರವಾಗಿ ಅಸಮಾಧಾನಗೊಂಡ ಕಂಗನಾ ರಣಾವತ್, ಆಕ್ರೋಶದಲ್ಲಿ ಅಸಭ್ಯ ಪದಗಳನ್ನು ಬಳಸಿ ಬೈದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್
ಮಂಡಿ ಕ್ಷೇತ್ರದ ಜನರು ದಿನನಿತ್ಯ ಇಲ್ಲಿನ ಅಪೂರ್ಣ ಕಾಮಗಾರಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಿ ಆಕ್ರೋಶ ಹೊರಹಾಕುತ್ತಿದ್ದಾರೆ. ಆದರೆ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ನಗುತ್ತಾ, ನನ್ನನ್ನೇ ಶಪಿಸುತ್ತಿದ್ದಾರೆ ಎಂದು ಕಂಗನಾ ಆಪಾದಿಸಿದರು.
ಇದನ್ನೂ ಓದಿ:
ಖಡಕ್ ಆದೇಶ
ಕ್ಷೇತ್ರದ ಸಂಸದರ ನಿಧಿಯನ್ನು ಸರಿಯಾಗಿ ಬಳಸಿಕೊಂಡು, ಬಾಕಿ ಉಳಿದಿರುವ ಎಲ್ಲಾ ಸಾರ್ವಜನಿಕ ಕಾಮಗಾರಿಗಳನ್ನು ತಕ್ಷಣವೇ ಮಾಡಿ, ಖರ್ಚು ವೆಚ್ಚಗಳ ಸಂಪೂರ್ಣ ವರದಿಯನ್ನು ತನಗೆ ಒಪ್ಪಿಸಬೇಕು ಎಂದು ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.



