September 5, 2026
Saturday, September 5, 2026
spot_img

ಕಸ್ತೂರಿರಂಗನ್ ವರದಿಗೆ ಸೆ.21ರಿಂದ ವಿಶೇಷ ಅಧಿವೇಶನ: ಕರಾವಳಿಯಲ್ಲಿ ಸಂಪುಟ ಸಭೆ ಘೋಷಣೆ

ಹೊಸದಿಗಂತ ವರದಿ ಅಂಕೋಲಾ:

ಕರಾವಳಿ ಭಾಗದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ದಿಸೆಯಲ್ಲಿ ಇದೇ ತಿಂಗಳಲ್ಲಿ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆಯನ್ನು ನಡೆಸಲು ಮುಖ್ಯಮಂತ್ರಿಗಳು ತೀರ್ಮಾನ ಮಾಡಿದ್ದಾರೆ ಎಂದ ಸಹಕಾರ ಮಂತ್ರಿ,ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಕರಾವಳಿ ಭಾಗದ ಬಹಳಷ್ಟು ಸಮಸ್ಯೆಗಳು,ವಿಚಾರಗಳು, ಅಭಿವೃದ್ಧಿ ಕಾರ್ಯಗಳ ಕುರಿತಂತೆ ಸಭೆಯಲ್ಲಿ ಚರ್ಚೆಯಾಗಲಿದೆ ಎಂದ ಅವರು, ರಾಜ್ಯದಲ್ಲಿ ಈ ವರ್ಷ ಬರ ಪರಿಸ್ಥಿತಿ ಎದುರಾಗಿದೆ ವಿರೋಧ ಪಕ್ಷದವರು ಒಂದು ಕ್ಷುಲ್ಲಕ ಕಾರಣಕ್ಕೆ ಒಂದು ವಾರದ ಕಾಲ ಅಧಿವೇಶನದ ಅವಧಿಯನ್ನು ಹಾಳು ಮಾಡಿದರು ಇದರಿಂದ ಪುನಃ ಅಧಿವೇಶನ ಕರೆಯುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:

ಕಸ್ತೂರಿ ರಂಗನ್ ವರದಿ ವಿಚಾರವಾಗಿ ಸೆಪ್ಟೆಂಬರ್21 ರಿಂದ 23ರ ವರೆಗೆ ಮೂರು ದಿನಗಳ ಕಾಲ ವಿಶೇಷ ಅಧಿವೇಶನ ಕರೆದು ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವ ತೀರ್ಮಾನ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸುವುದಾಗಿ ಹೇಳಿದ ಸಚಿವ ಸವದಿ ಕಳೆದ 50 ವರ್ಷಗಳಲ್ಲಿ ಕಾಣದಂತ ಬರ ಪರಿಸ್ಥಿತಿ ರಾಜ್ಯದಲ್ಲಿ ಈ ವರ್ಷ ಕಂಡು ಬಂದಿದ್ದು ಅದರ ಕುರಿತಂತೆ ಪಕ್ಷಾತೀತವಾಗಿ ಚರ್ಚೆ ನಡೆಸಲಾಗುವುದು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಲು ಕೇಂದ್ರ ಸರ್ಕಾರ ರಾಜ್ಯದೊಂದಿಗೆ ಕೈಜೋಡಿಸಿ ಬರ ಪರಿಸ್ಥಿತಿಯ ಭಾರವನ್ನು ಹೊರಬೇಕಿದೆ.

ಈ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಅಧಿವೇಶನದ ಮೂಲಕ ಪ್ರಸ್ತಾವನೆ ಸಲ್ಲಿಸಲಾಗುವುದು ವಿರೋಧ ಪಕ್ಷಗಳು ರಾಜಕಾರಣವನ್ನು ಬದಿಗಿಟ್ಟು ಕಸ್ತೂರಿರಂಗನ್ ವರದಿ ತಿರಸ್ಕಾರ ಮತ್ತು ಬರಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರದ ಸಹಾಯ ಎರಡೂ ನಿಲುವುಗಳಿಗೆ ಆಡಳಿತ ಪಕ್ಷದ ಜೊತೆ ನಿಲ್ಲಬೇಕು ಎಂದು ಆಗ್ರಹಿಸುವುದಾಗಿ ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !