ಹೊಸದಿಗಂತ ವರದಿ ಬಳ್ಳಾರಿ:
ಸೆ.10ರಂದು ಬಳ್ಳಾರಿ ನಗರದಲ್ಲಿ ನಡೆಯಲಿರುವ ‘ಬಳ್ಳಾರಿ ಚಲೋ’ ಬೃಹತ್ ಪಾದಯಾತ್ರೆ ಸ್ಥಳಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ.
ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಸೆ.10 ರಂದು ಬಹಿರಂಗ ಸಮಾವೇಶ ನಡೆಸಲು ಬಿಜೆಪಿ ಸ್ಥಳೀಯ ನಾಯಕರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ಜಿಲ್ಲಾಡಳಿತ ಮುಖ್ಯವೇದಿಕೆ ಸ್ಥಳಕ್ಕೆ ಅನುಮತಿ ನೀಡದೇ ನಿರಾಕರಿಸಿದ್ದರು. ಪಟ್ಟಿ ಬಿಡದ ನಾಯಕರು ಕಚೇರಿಯಲ್ಲಿ ಬಿಡು ಬಿಟ್ಟು ನಿಯಮದಂತೆ ಅನುಮತಿ ನೀಡಿ, ನಾವು ನಿಗದಿ ಪಡಿಸಿದ ಸ್ಥಳದಲ್ಲೇ ಕಾಂಗ್ರೆಸ್ ನಾಯಕರು ಬಹಿರಂಗ ಸಮಾವೇಶ, ಸಭೆ, ಸಮಾರಂಭಗಳನ್ನು ನಡೆಸಿದ್ದರು. ನಮಗೇಕೆ ಹೀಗೆ, ಬಿಜೆಪಿಗೆ ಒಂದು ಕಾನೂನು, ಕಾಂಗ್ರೆಸ್ ಗೆ ಒಂದು ಕಾನುನಾ ಎಂದು ಅಧಿಕಾರಗಳನ್ನು ಪ್ರಶ್ನಿಸಿದರು.
ಸಂಜೆಯೊಳಗೆ ಅನುಮತಿ ನೀಡದಿದ್ದರೆ, ಡಿಸಿ ಕಚೇರಿ ಅಥವಾ ಜಿಲ್ಲಾ ಉಸ್ತುವಾರಿ ಸಚಿವ ಮನೆ ಎದುರೇ ಬಿಜೆಪಿ ಸಮಾವೇಶ ನಡೆಸಲಾಗುವುದು ಎಂದು ವಿಜಯೇಂದ್ರ ಅವರು ಎಚ್ಚರಿಸಿದ್ದರು. ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೊಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೀವ, ರಾಜ್ಯ ಕಾರ್ಯದರ್ಶಿ ತಮ್ಮೇಶಾ ಗೌಡ, ಹಾಗೂ ಬಿಜೆಪಿ ವಿವಿಧ ನಾಯಕರ ಹಾಗೂ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಅವರೊಂದಿಗೆ ನಡೆದ ಸಭೆಯಲ್ಲಿ ಅನುಮತಿ ನೀಡುವ ಕುರಿತು ಅಧಿಕಾರಿಗಳು ನಿರ್ಧಾರ ಪ್ರಕಟಿಸಿದ್ದು, ಇದು ನಮ್ಮ ಹೋರಾಟಕ್ಕೆ ಸಂದ ಜಯ ಎಂದು ಬಿಜೆಪಿ ಕಾರ್ಯಕರ್ತರು, ಮುಖಂಡರು ಬಣ್ಣಿಸಿದ್ದಾರೆ.
ಇದನ್ನೂ ಓದಿ:
ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ವಿರುದ್ಧ ಮಂಗಳವಾರ ಸಂಜೆ ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರ ನೇತೃತ್ವದಲ್ಲಿ ಸ್ಥಳೀಯ ಬಿಜೆಪಿ ನಾಯಕರು ನಗರದ ರಾಯಲ್ ಸರ್ಕಲ್ ನಲ್ಲಿ ಹೋರಾಟವನ್ನು ಹಮ್ಮಿಕೊಂಡಿದ್ದರು. ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸಂಜೆ ಕರೆ ನೀಡಿದ ಹೋರಾಟವನ್ನು ಕೈಬಿಡಲಾಗಿದೆ.



