ಹೊಸದಿಗಂತ ವರದಿ ಬೆಳಗಾವಿ:
ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆ, ಗೌರವ ಮತ್ತು ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಇಲಾಖೆಗಳು ಪರಿಣಾಮಕಾರಿ ಹಾಗೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮಹಿಳೆಯರು ದೂರು ನೀಡಲು ಪೊಲೀಸ್ ಠಾಣೆಗೆ ಬಂದಾಗ ಸೌಜನ್ಯ ಹಾಗೂ ಸೂಕ್ಷ್ಮತೆಯಿಂದ ವರ್ತಿಸಿ, ಸತ್ಯಾಂಶವಿರುವ ಪ್ರಕರಣಗಳಲ್ಲಿ ಕಾನೂನುಬದ್ಧವಾಗಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸುವರ್ಣ ವಿಧಾನ ಸೌಧದ ಸೆಂಟ್ರಲ್ ಹಾಲ್ ನಲ್ಲಿ ಮಹಿಳಾ ಸ್ಪಂದನಾ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಿಳೆಯರ ದೂರು ನಿರ್ಲಕ್ಷ್ಯ ಮಾಡೋಹಾಗಿಲ್ಲ
ಹತ್ತು ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುವ ಎಲ್ಲ ಕಚೇರಿಗಳು, ಸಂಸ್ಥೆಗಳು ಹಾಗೂ ಕೆಲಸದ ಸ್ಥಳಗಳಲ್ಲಿ ಆಂತರಿಕ ದೂರು ಸಮಿತಿ (ಐಸಿಸಿ) ಕಡ್ಡಾಯವಾಗಿ ರಚಿಸಬೇಕು. ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲು ನಿರಾಕರಿಸುವುದು ಅಥವಾ ಅನಗತ್ಯ ವಿಳಂಬ ಮಾಡುವುದು ಸಹಿಸಲಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಮಹಿಳೆಯರು ನೇರವಾಗಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ದೂರು ಸಲ್ಲಿಸಬಹುದು ಎಂದು ತಿಳಿಸಿದರು.
ಮಕ್ಕಳಿಗೆ ‘ಗುಡ್ ಟಚ್–ಬ್ಯಾಡ್ ಟಚ್’ ಗೊತ್ತಿರಲಿ
ಶಾಲೆಗಳಲ್ಲಿ ಪೋಕ್ಸೋ ಕಾಯ್ದೆ, ಮಕ್ಕಳ ಸುರಕ್ಷತೆ ಹಾಗೂ ‘ಗುಡ್ ಟಚ್–ಬ್ಯಾಡ್ ಟಚ್’ ಕುರಿತು ನಿರಂತರ ಜಾಗೃತಿ ಮೂಡಿಸಬೇಕು. ಬಾಲ್ಯ ವಿವಾಹ ತಡೆಗೆ ಗ್ರಾಮ ಮತ್ತು ತಾಲೂಕು ಮಟ್ಟದಲ್ಲಿ ನಿಗಾ ವಹಿಸಿ, ಕೈಗೊಂಡ ಕ್ರಮಗಳ ಕುರಿತು ಜಿಪಿಎಸ್ ಆಧಾರಿತ ಛಾಯಾಚಿತ್ರಗಳೊಂದಿಗೆ ನಿಯಮಿತ ವರದಿ ಸಲ್ಲಿಸುವಂತೆ ಸೂಚಿಸಿದರು.
ಇದನ್ನೂ ಓದಿ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪೊಲೀಸ್ ಹಾಗೂ ಶಿಕ್ಷಣ ಇಲಾಖೆಗಳು ಸಂಘ-ಸಂಸ್ಥೆಗಳು ಮತ್ತು ಖಾಸಗಿ ಶಾಲೆಗಳ ಸಹಕಾರದೊಂದಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
ವಸತಿ ನಿಲಯಗಳಲ್ಲಿ ಮೂಲಸೌಕರ್ಯ ಕಲ್ಪಿಸಬೇಕು
ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಪೌಷ್ಟಿಕ ಆಹಾರ, ಸ್ವಚ್ಛತೆ, ಕುಡಿಯುವ ನೀರು ಹಾಗೂ ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಮೇಲಾಧಿಕಾರಿಗಳು ಪ್ರತಿ ತಿಂಗಳು ಪರಿಶೀಲನೆ ನಡೆಸಬೇಕು. ಅಗತ್ಯವಿರುವ ವಸತಿ ನಿಲಯಗಳ ಸಮೀಪ ಬಸ್ ನಿಲ್ದಾಣ ಕಲ್ಪಿಸಲು ಸಾರಿಗೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವಂತೆ ತಿಳಿಸಿದರು.
ಬಿಮ್ಸ್ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಎದುರಾಗುತ್ತಿರುವ ಮೂಲಸೌಕರ್ಯ ಸಮಸ್ಯೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ಬೀಗ ಹಾಕಿರುವ ಶೌಚಾಲಯಗಳನ್ನು ಕೂಡಲೇ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿ ಸ್ವಚ್ಛತೆ ಮತ್ತು ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಗರ್ಭಿಣಿಯರು ವೈದ್ಯಕೀಯ ಪರೀಕ್ಷೆಗಳಿಗೆ ಅನಗತ್ಯವಾಗಿ ಅಲೆದಾಡದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ವರದಕ್ಷಿಣೆ ಕಿರುಕುಳ, ಕೊಲೆ, ಆಸ್ತಿ ವಿವಾದ, ಕೌಟುಂಬಿಕ ಕಲಹ ಹಾಗೂ ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ ವಿಚಾರಣೆ ನಡೆಸಲಾಯಿತು. ನೊಂದವರಿಗೆ ತ್ವರಿತ ನ್ಯಾಯ ದೊರಕುವಂತೆ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಸಭೆಯಲ್ಲಿ ಮಹಿಳಾ ಆಯೋಗದ ಕಾರ್ಯದರ್ಶಿ ರೂಪಾ ಆರ್., ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕ್ಕಂ, ಜಿಪಂ ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.



