ಹೊಸದಿಗಂತ ವರದಿ ಬೆಳಗಾವಿ:
ನಗರದ ರಸ್ತೆಗಳಲ್ಲಿ ಬಿದ್ದಿರುವ ಅಪಾಯಕಾರಿ ಗುಂಡಿಗಳನ್ನು ಮುಚ್ಚಿ ನಾಗರಿಕರಿಗೆ ಸುಗಮ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯು ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ‘ಇನ್ಸ್ಟಾ ರೋಡ್ ಪ್ಯಾಚರ್’ ಎಂಬ ಹೊಸ ವಾಹನವನ್ನು ಪರಿಚಯಿಸಿದೆ.
ನಗರದ ಪಿಬಿ ರಸ್ತೆಯ ಬಳಿ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್, ಮೇಯರ್, ಉಪಮೇಯರ್ ಹಾಗೂ ಮಹಾನಗರ ಪಾಲಿಕೆ ಆಯುಕ್ತರ ಉಪಸ್ಥಿತಿಯಲ್ಲಿ ಈ ಯಂತ್ರಕ್ಕೆ ಪೂಜೆ ಸಲ್ಲಿಸಿ, ಅಧಿಕೃತವಾಗಿ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಭಯ್ ಪಾಟೀಲ್, “ಮಳೆಗಾಲದಲ್ಲಿ ನಗರದಲ್ಲಿ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗುವುದರಿಂದ ಸಾರ್ವಜನಿಕರು ಮತ್ತು ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದರು. ಈ ಸಮಸ್ಯೆಗೆ ತಕ್ಷಣದ ಪರಿಹಾರವಾಗಿ ಈ ಆಧುನಿಕ ಪ್ಯಾಚ್ವರ್ಕ್ ಯಂತ್ರವನ್ನು ತರಲಾಗಿದೆ. ವಿಶೇಷವಾಗಿ ಬೆಳಗಾವಿ ದಕ್ಷಿಣ ಕ್ಷೇತ್ರದ ರಸ್ತೆಗಳ ಗುಂಡಿಗಳನ್ನು ಅತ್ಯಂತ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಮುಚ್ಚಲು ಇದು ಉಪಯುಕ್ತವಾಗಲಿದೆ. ಇಡೀ ಕರ್ನಾಟಕದಲ್ಲೇ ಮೊದಲ ಬಾರಿಗೆ ಇಂತಹ ಆಧುನಿಕ ವ್ಯವಸ್ಥೆಯನ್ನು ಬೆಳಗಾವಿ ನಗರದಲ್ಲಿ ಅಳವಡಿಸಿಕೊಳ್ಳಲಾಗಿದೆ” ಎಂದು ಪ್ರಮುಖ ಮಾಹಿತಿ ಹಂಚಿಕೊಂಡರು.
ಮಹಾಪೌರ ಪ್ರೀತಿ ಕಾಮಕರ್ ಅವರು ಮಾತನಾಡಿ, ಈ ಯಂತ್ರದ ನೆರವಿನಿಂದ ‘ಕೋಲ್ಡ್ ಡಾಂಬರೀಕರಣ’ ಮಾಡುವ ಮೂಲಕ ಪ್ರತ್ಯಕ್ಷವಾಗಿ ಗುಂಡಿಗಳನ್ನು ಮುಚ್ಚಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಸಾಂಪ್ರದಾಯಿಕ ವಿಧಾನಗಳಿಗಿಂತ ಭಿನ್ನವಾಗಿ, ನಿರಂತರ ಮಳೆ ಬೀಳುವ ದಿನಗಳಲ್ಲೂ ರಸ್ತೆ ದುರಸ್ತಿ ಕಾರ್ಯವನ್ನು ಯಾವುದೇ ಅಡಚಣೆಯಿಲ್ಲದೆ ವೇಗವಾಗಿ ಪೂರ್ಣಗೊಳಿಸಲು ಇದರಿಂದ ಸಾಧ್ಯವಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ:
ಪಾಲಿಕೆ ಆಯುಕ್ತ ಕಾರ್ತಿಕ್ ಎಂ ಅವರು ಮಾತನಾಡಿ, ಈ ತಂತ್ರಜ್ಞಾನವು ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ. ರಸ್ತೆ ದುರಸ್ತಿಯಲ್ಲಿ ಸುಧಾರಿತ ಗುಣಮಟ್ಟವನ್ನು ಕಾಯ್ದುಕೊಳ್ಳಲು ಪಾಲಿಕೆ ಬದ್ಧವಾಗಿದೆ ಎಂದು ಯೋಜನೆಯ ತಾಂತ್ರಿಕ ವಿವರಗಳನ್ನು ಹಂಚಿಕೊಂಡರು.
ಈ ನೂತನ ವಾಹನದ ಆಗಮನದಿಂದ ಬೆಳಗಾವಿ ನಗರದ ರಸ್ತೆಗಳು ಶೀಘ್ರದಲ್ಲೇ ಗುಂಡಿಮುಕ್ತವಾಗಲಿವೆ ಎಂಬ ಭರವಸೆ ಬೆಳಗಾವಿ ನಗರದ ಜನತೆಯಲ್ಲಿ ಮೂಡಿಸಿದರು.



