September 8, 2026
Tuesday, September 8, 2026
spot_img

‘ಭಾರತದ ನಿಲುವು ನಮ್ಮ ನಿಲುವಿಗೆ ಹತ್ತಿರ’: ಉಕ್ರೇನ್ ಶಾಂತಿ ಪ್ರಯತ್ನಕ್ಕೆ ರಷ್ಯಾದಿಂದ ಬಿಗ್ ಸಪೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಕ್ರೇನ್ ಸಂಘರ್ಷಕ್ಕೆ ಅಂತ್ಯ ಹಾಡಲು ಭಾರತ ಕೈಗೊಳ್ಳುವ ಯಾವುದೇ ಶಾಂತಿ ಪ್ರಯತ್ನವನ್ನು ರಷ್ಯಾ ಸ್ವಾಗತಿಸಲಿದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಸಂವಾದ ಮತ್ತು ರಾಜತಾಂತ್ರಿಕ ಮಾರ್ಗದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂಬ ಭಾರತದ ನಿಲುವು ಹಾಗೂ ರಷ್ಯಾದ ನಿಲುವು ಬಹುತೇಕ ಒಂದೇ ರೀತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ಬ್ರಿಕ್ಸ್ ಶೃಂಗಸಭೆ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ನಡೆದ ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪೆಸ್ಕೋವ್, ಉಕ್ರೇನ್ ಸಂಘರ್ಷದ ಕುರಿತು ಭಾರತದ ನಿಲುವು ತಮಗೆ ತಿಳಿದಿದ್ದು, ಶಾಂತಿಯುತ ಪರಿಹಾರ ಕಂಡುಕೊಳ್ಳುವ ಪ್ರಕ್ರಿಯೆಗೆ ರಷ್ಯಾ ಮುಕ್ತವಾಗಿದೆ ಎಂದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಬ್ರಿಕ್ಸ್ ಶೃಂಗಸಭೆಯ ಸಂದರ್ಭ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಪರಸ್ಪರ ಹಿತಾಸಕ್ತಿಯ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಲಿದ್ದು, ಉಕ್ರೇನ್ ಯುದ್ಧದ ಪ್ರಸ್ತುತ ಪರಿಸ್ಥಿತಿಯ ಬಗ್ಗೆಯೂ ಪುಟಿನ್ ಅವರು ಮೋದಿಗೆ ಮಾಹಿತಿ ನೀಡುವ ಸಾಧ್ಯತೆಯಿದೆ. ಉಭಯ ನಾಯಕರು ಸೂಕ್ಷ್ಮ ವಿಚಾರಗಳನ್ನೂ ಮುಕ್ತ ಹಾಗೂ ರಚನಾತ್ಮಕವಾಗಿ ಚರ್ಚಿಸುವ ನಿಕಟ ಸಂಬಂಧ ಹೊಂದಿದ್ದಾರೆ ಎಂದು ಪೆಸ್ಕೋವ್ ಹೇಳಿದರು.

ಇದನ್ನೂ ಓದಿ:

ಭಾರತ-ರಷ್ಯಾ ನಡುವಿನ ವ್ಯಾಪಾರ ಅಸಮತೋಲನದ ವಿಚಾರವನ್ನೂ ಭಾರತ ಪ್ರಸ್ತಾಪಿಸಿದೆ. ಇದನ್ನು ಸರಿಪಡಿಸಲು ರಷ್ಯಾದ ಕಂಪನಿಗಳು ಭಾರತದಿಂದ ಹೆಚ್ಚಿನ ಸರಕುಗಳ ಖರೀದಿ ಹಾಗೂ ಭಾರತದಲ್ಲಿ ಜಂಟಿ ಯೋಜನೆಗಳ ಆರಂಭದ ಸಾಧ್ಯತೆಗಳನ್ನು ಪರಿಶೀಲಿಸುತ್ತಿವೆ ಎಂದರು.

ಭಾರತ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿರುವ ಇಂಧನದ ಪ್ರಮಾಣ ಪ್ರತಿ ತಿಂಗಳು ಹೊಸ ದಾಖಲೆ ನಿರ್ಮಿಸುತ್ತಿದೆ ಎಂದು ಹೇಳಿದ ಪೆಸ್ಕೋವ್, ನಿಖರ ಅಂಕಿ ನೀಡಲು ನಿರಾಕರಿಸಿದರು. ರಷ್ಯಾದೊಂದಿಗೆ ವ್ಯಾಪಾರ ನಡೆಸುವ ದೇಶಗಳ ಮೇಲೆ ನಿರ್ಬಂಧ ಹೇರುವುದು ಕಾನೂನುಬಾಹಿರ ಹಾಗೂ ಸ್ವೀಕಾರಾರ್ಹವಲ್ಲ ಎಂದರು.

ಬ್ರಿಕ್ಸ್ ಯಾರ ವಿರುದ್ಧವೂ ಅಲ್ಲ, ಸದಸ್ಯ ರಾಷ್ಟ್ರಗಳ ಹಿತಾಸಕ್ತಿಗಾಗಿ ಇರುವ ವೇದಿಕೆ ಎಂದು ಸ್ಪಷ್ಟಪಡಿಸಿದ ಅವರು, ಶೃಂಗಸಭೆಯಲ್ಲಿ ಕೃತಕ ಬುದ್ಧಿಮತ್ತೆ (AI) ಪ್ರಮುಖ ಚರ್ಚಾ ವಿಷಯವಾಗಲಿದೆ ಎಂದರು. ಜಾಗತಿಕ ಬಹುಮತದಲ್ಲಿ ಭಾರತವನ್ನು ರಷ್ಯಾ ಅತ್ಯಂತ ಪ್ರಮುಖ ಪಾಲುದಾರವಾಗಿ ಪರಿಗಣಿಸುತ್ತದೆ ಎಂದು ಪೆಸ್ಕೋವ್ ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !