ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ಪ್ಯಾರಿಸ್‌ನ ಐಫೆಲ್ ಟವರ್‌ನಲ್ಲಿ ಲಿಂಗ ತಾರತಮ್ಯದ ವಿವಾದ ಭುಗಿಲೆದ್ದಿದೆ. ಬೋಚಾಸನವಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥೆ (BAPS) ಹಿಂದೂ ಧಾರ್ಮಿಕ ನಿಯೋಗದ ಭೇಟಿಯ ಸಂದರ್ಭದಲ್ಲಿ, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿಯನ್ನು ತಮ್ಮ ಕೆಲಸದ ಜಾಗದಿಂದ ದೂರ ಸರಿಯುವಂತೆ ಸೂಚಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದರ ವಿರುದ್ಧ ಸಿಬ್ಬಂದಿ ತೀವ್ರ ಪ್ರತಿಭಟನೆ ನಡೆಸಿದ್ದರಿಂದ ಸೋಮವಾರ ಎಫಿಲ್ ಟವರ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು.
ಪ್ಯಾರಿಸ್ ಬಳಿ ನಿರ್ಮಿಸಲಾಗಿರುವ ಬೃಹತ್ ಹಿಂದೂ ದೇವಾಲಯದ ಉದ್ಘಾಟನಾ ಸಮಾರಂಭಕ್ಕಾಗಿ ಫ್ರಾನ್ಸ್‌ಗೆ ಆಗಮಿಸಿದ್ದ ಬಿಎಪಿಎಸ್ ಸಂಸ್ಥೆಯ ಸುಮಾರು 100 ಜನರ ನಿಯೋಗವು ಶನಿವಾರ ಎಫಿಲ್ ಟವರ್‌ಗೆ ಭೇಟಿ ನೀಡಿತ್ತು. ಈ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಮಹಿಳೆಯರ ಜಾಗಕ್ಕೆ ಪುರುಷ ಸಿಬ್ಬಂದಿ ನೇಮಕ
ಕಾರ್ಮಿಕ ಸಂಘಟನೆಯ ಪ್ರತಿನಿಧಿಗಳ ಪ್ರಕಾರ, ಬಿಎಪಿಎಸ್ ನಿಯೋಗವು ಹಾದುಹೋಗುವ ಮಾರ್ಗದಲ್ಲಿದ್ದ ಮಹಿಳಾ ಉದ್ಯೋಗಿಗಳಿಗೆ ಅಲ್ಲಿಂದ ಹೊರಡುವಂತೆ ಸೂಚಿಸಲಾಗಿತ್ತು. ಅವರ ಜಾಗಕ್ಕೆ ಪುರುಷ ಉದ್ಯೋಗಿಗಳನ್ನು ನಿಯೋಜಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ಇದರಿಂದ ಆಕ್ರೋಶಗೊಂಡ ಸಿಬ್ಬಂದಿ, ಸೋಮವಾರ ಬೆಳ್ಳಂಬೆಳಗ್ಗೆ ಸಭೆ ನಡೆಸಿ ಪ್ರತಿಭಟನೆಗೆ ಧುಮುಕಿದರು. ಹೀಗಾಗಿ ಪ್ರವಾಸಿಗರಿಗೆ ಎಫಿಲ್ ಟವರ್ ಪ್ರವೇಶ ವಿಳಂಬವಾಯಿತು. ಆಡಳಿತ ಮಂಡಳಿಯು ಕಾರ್ಯಾಚರಣೆಯ ಕಾರಣಗಳಿಂದಾಗಿ ಟವರ್ ತೆರೆಯುವುದು ತಡವಾಗಿದೆ ಎಂದು ಬೋರ್ಡ್ ಹಾಕಿತ್ತು.
ತಪ್ಪು ಒಪ್ಪಿಕೊಂಡ ಎಫಿಲ್ ಟವರ್ ಆಡಳಿತ ಮಂಡಳಿ
ಎಫಿಲ್ ಟವರ್ ನಿರ್ವಹಿಸುವ ಕಂಪನಿಯಾದ SETE, ನಿಯೋಗದ ಭೇಟಿಯ ವೇಳೆ “ಮಹಿಳೆಯರೊಂದಿಗೆ ಯಾವುದೇ ಸಂವಹನ ಇರದಂತೆ” ನೋಡಿಕೊಳ್ಳಲು ವಿನಂತಿಸಲಾಗಿತ್ತು ಎಂಬುದನ್ನು ಒಪ್ಪಿಕೊಂಡಿದೆ. ಆದರೆ, ಇಂತಹ ಲಿಂಗ ತಾರತಮ್ಯದ ಷರತ್ತುಗಳನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿರುವ ಆಡಳಿತ ಮಂಡಳಿ, ಈ ಬಗ್ಗೆ ಸಮಗ್ರ ಆಂತರಿಕ ತನಿಖೆ ನಡೆಸುವುದಾಗಿ ಪ್ರಕಟಿಸಿದೆ. ಪ್ಯಾರಿಸ್ ಮೇಯರ್ ಎಮ್ಯಾನುಯೆಲ್ ಗ್ರೆಗೊಯಿರ್ ಮತ್ತು ಫ್ರಾನ್ಸ್ ಸಂಸತ್ತಿನ ಅಧ್ಯಕ್ಷೆ ಯೇಲ್ ಬ್ರೌನ್-ಪಿವೆಟ್ ಕೂಡ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ತನಿಖೆಗೆ ಆದೇಶಿಸಿದ್ದಾರೆ.
ಸ್ಪಷ್ಟನೆ ನೀಡಿದ ಬಿಎಪಿಎಸ್ ಸಂಸ್ಥೆ
ಈ ವಿವಾದದ ಕುರಿತು ಬಿಎಪಿಎಸ್ ಸಂಸ್ಥೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಯಾರನ್ನೂ ಸ್ಮಾರಕದ ಒಳಗೆ ಹೋಗದಂತೆ ತಡೆಯಲಾಗಿಲ್ಲ. ಇತರ ಪ್ರವಾಸಿಗರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಎಫಿಲ್ ಟವರ್ ಅಧಿಕಾರಿಗಳೊಂದಿಗೆ ಮುಂಚಿತವಾಗಿಯೇ ಮಾತನಾಡಿ ಭೇಟಿಯ ಸಮಯ ನಿಗದಿಪಡಿಸಲಾಗಿತ್ತು ಎಂದು ತಿಳಿಸಿದೆ. ಯಾರದೇ ಭಾವನೆಗಳಿಗೆ ಧಕ್ಕೆ ಉಂಟಾಗಿದ್ದರೆ ಕ್ಷಮೆಯಾಚಿಸುವುದಾಗಿ ಹೇಳಿರುವ ಸಂಸ್ಥೆ, ತಾವು ಪರಸ್ಪರ ಗೌರವ ಮತ್ತು ಮಾನವ ಸೇವೆಯ ಮೌಲ್ಯಗಳಿಗೆ ಬದ್ಧರಾಗಿರುವುದಾಗಿ ಸ್ಪಷ್ಟಪಡಿಸಿದೆ.
ಮಂದಿರ ಉದ್ಘಾಟನೆ ಬೆನ್ನಲ್ಲೇ ವಿವಾದ
ಫ್ರಾನ್ಸ್‌ನ ಪ್ಯಾರಿಸ್ ಬಳಿ ಬಿಎಪಿಎಸ್ ಸಂಸ್ಥೆಯು ತನ್ನ ಮೊದಲ ಬೃಹತ್ ಹಿಂದೂ ಮಂದಿರವನ್ನು ಉದ್ಘಾಟಿಸಿದ ಮರುದಿನವೇ ಈ ವಿವಾದ ಭುಗಿಲೆದ್ದಿದೆ. ಭಾರತ ಮತ್ತು ಫ್ರಾನ್ಸ್ ನಡುವಿನ ಸಾಂಸ್ಕೃತಿಕ ಸಂಬಂಧದ ಸಂಕೇತವಾಗಿ ಈ ಮಂದಿರ ತಲೆಎತ್ತಿದೆ. ಸದ್ಯ ಈ ವಿವಾದವು ಪ್ಯಾರಿಸ್ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.



