September 11, 2026
Friday, September 11, 2026
spot_img

ಪಾವಗಡದಲ್ಲಿ ಮರುಕಳಿಸಿದ ನಕ್ಸಲ್ ಹಾವಳಿ: ದೇವಣ್ಣ ದಳಂ ಹೆಸರಿನ ನಕ್ಸಲ್ ಪತ್ರ; ಐದು ಲಕ್ಷಕ್ಕೆ ರೈತನಿಗೆ ಡಿಮ್ಯಾಂಡ್

ಹೊಸದಿಗಂತ ವರದಿ ತುಮಕೂರು

 ‘ಕಾಮ್ರೇಡ್ ದೇವಣ್ಣ’ದಳಂ ಹೆಸರಿನಲ್ಲಿ ರೈತನಿಗೆ ಐದು ಲಕ್ಷಕ್ಕೆ ಬೇಡಿಕೆ ಇಟ್ಟು ನಕ್ಸಲರು ಪತ್ರ ಬರೆದಿರುವ ಘಟನೆ ಬೆಳಕಿಗೆ ಬಂದಿದ್ದು, ಪಾವಗಡ ತಾಲ್ಲೂಕಿನ ಜನತೆ ಬೆಚ್ಚಿಬಿದ್ದಿದ್ದಾರೆ.

ಪಾವಗಡ ತಾಲೂಕಿನ ಗಂಗಸಾಗರ ಗ್ರಾಮದ ರೈತ ನಾಗಭೂಷಣ್ ಎಂಬುವರಿಗೆ ಸೇರಿದ ಜಮೀನಿನ ಶೆಡ್ ಮೇಲೆ ಸೆ.10 ರಂದು ತೆಲುಗು ಭಾಷೆಯಲ್ಲಿ ಬರೆದಿರುವ ಬೆದರಿಕೆ ಪತ್ರ ಪತ್ತೆಯಾಗಿದೆ.

ಪತ್ರದಲ್ಲಿ ನಕ್ಸಲ್ ಆರೋಪಿ ವೆಂಕಟೇಶ್ ವಿರುದ್ಧದ ಕೋಟ್೯ನಲ್ಲಿ ದಾಖಲಾಗಿರುವ ಕೇಸ್  ನಡೆಸಲು ಹಣ ಬೇಕಾಗಿರುವುದರಿಂದ ಐದು ಲಕ್ಷ ಹಣ ನೀಡವಂತೆ ಹಾಗೂ ನಿರ್ಲಕ್ಷ್ಯ ಮಾಡಿದಲ್ಲಿ ಅನಾಹುತ ಸಂಭವಿಸಲಿದೆ ಎಂದು ಬೆದರಿಕೆ ಹಾಕಲಾಗಿದೆ.

ಕಳೆದ 20 ವರ್ಷಗಳ ಬಳಿಕ ಮತ್ತೆ ಪಾವಗಡ ತಾಲ್ಲೂಕಿನಲ್ಲಿ ಪೀಪಲ್ಸ್ ವಾರ್ ಜನಶಕ್ತಿ ಪಾರ್ಟಿ, ಕಾಮ್ರೇಡ್ ದೇವಣ್ಣ ದಳಂ ಹೆಸರಿನಲ್ಲಿ ಬ್ಲಾಕ್‌ಮೇಲ್ ದಂಧೆ ಆರಂಭವಾಗಿದೆ, ತಾಲ್ಲೂಕಿನ ಕನಿಕಲಬಂಡೆ ಗ್ರಾಮದಲ್ಲಿ ಫೆಬ್ರವರಿ ತಿಂಗಳಲ್ಲಿ ವ್ಯಕ್ತಿಗೆ ಜೀವ ಬೆದರಿಕೆ, ನಂತರ ಆಗಸ್ಟ್-29 ರಂದು ನಾಡಬಾಂಬ್ ಸ್ಪೋಟ ಮಾಡಿರುವ ನಕ್ಸಲ್ ಗುಂಪು ಇದೀಗ ಗಂಗಸಾಗರದ ರೈತನೊಬ್ಬನಿಗೆ 5 ಲಕ್ಷ ಬೇಡಿಕೆಯಿಟ್ಟು ಬರೆದಿರುವ ಪತ್ರಕ್ಕೆ ತಾಲೂಕಿನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ, ಆದರೆ ಪೋಲಿಸ್ ಇಲಾಖೆ ಮೌನಕ್ಕೆ ಜಾರಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಪತ್ರದಲ್ಲಿ “ಪೀಪಲ್ಸ್ ವಾರ್ ಜನಶಕ್ತಿ ಪಾರ್ಟಿ, ದೇವಣ್ಣ ದಳಂ, ಆಂಧ್ರಪ್ರದೇಶ ಎಂಬ ವಿಳಾಸವಿದ್ದು, ಕಾಮ್ರೇಡ್ ದೇವಣ್ಣ ಸಹಿ ಇದೆ ಎನ್ನಲಾಗಿದೆ.

ಪತ್ರದ ಸಾರಾಂಶ

“ಸ್ವಚ್ಛ ಸಮಾಜ ಹಾಗೂ ದೌರ್ಜನ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ನಮ್ಮ ಹೋರಾಟ ನಿರಂತರ. ಕನಿಕಲಬಂಡೆ ಗ್ರಾಮದಲ್ಲಿ ಉಪ್ಪಾರ ವೆಂಕಟೇಶ್ ಎಂಬುವವರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅವರ ನೋವಿಗೆ ಸ್ಪಂದಿಸಿ ದಳಂ ತಾಲ್ಲೂಕಿಗೆ ಪ್ರವೇಶ ಮಾಡಿದೆ. ಅವರ ವಿರುದ್ಧ ಕೇಸುಗಳಿದ್ದು, ಸಂಘಟನೆ ಬೆಳವಣಿಗೆಗೆ ಹಣದ ಅಗತ್ಯವಿದೆ. ಹೀಗಾಗಿ ಸೆ.16 ರೊಳಗೆ ವಕೀಲ ಸುಬ್ಬರಾಯಪ್ಪ ಅವರೊಂದಿಗೆ 5 ಲಕ್ಷ ರೂ. ಕಳುಹಿಸಿಕೊಡಬೇಕು. ಇಲ್ಲವಾದರೆ ಪರಿಣಾಮ ಎದುರಿಸಬೇಕಾಗುತ್ತದೆ. ಈ ವಿಷಯ ಪೊಲೀಸರಿಗೆ ತಿಳಿಸಿದರೆ ಅನಾಹುತ ಎದುರಿಸಬೇಕಾಗುತ್ತದೆ. ಎಂದು ಬೆದರಿಕೆ ಹಾಕಲಾಗಿದೆ.

ತಾಲೂಕಿನಲ್ಲಿ 1997-2005 ರವರೆಗೆ ನಕ್ಸಲ್ ಚಟುವಟಿಕೆ ತೀವ್ರವಾಗಿತ್ತು. 2005ರಲ್ಲಿ ರೊದ್ದಂ ಪೊಲೀಸ್ ಠಾಣೆ ಬಾಂಬ್ ಸ್ಫೋಟದ ಬೆನ್ನಲ್ಲೇ 2005ರ ಫೆ.9 ರಂದು ವೆಂಕಟಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ನಕ್ಸಲರು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದು 7 ಪೊಲೀಸರು ಮತ್ತು ಖಾಸಗಿ ಬಸ್ ಕ್ಲೀನರ್ ಒಬ್ಬರು ಹತ್ಯೆಯಾಗಿದ್ದರು. ನಂತರ ಪೊಲೀಸ್ ಕಾರ್ಯಾಚರಣೆಯಿಂದ ನಕ್ಸಲ್ ಹಾವಳಿ ಕಡಿಮೆಯಾಗಿ ಶಾಂತಿ ನೆಲೆಸಿತ್ತು.

ಇದನ್ನೂ ಓದಿ:

ಇತ್ತೀಚೆಗೆ ಕನಿಕಲಬಂಡೆ ಗ್ರಾಮದ ಉಪ್ಪಾರ ವೆಂಕಟೇಶ್ ಹಾವಳಿ ಹೆಚ್ಚಾಗಿದ್ದು, ದೌರ್ಜನ್ಯ, ಬೆದರಿಕೆ ನಡೆಸುತ್ತಿದ್ದಾನೆ ಎಂದು ಗ್ರಾಮಸ್ಥರು ದೂರು ನೀಡಿದ್ದರು. ಪೊಲೀಸರು ಗ್ರಾಮಕ್ಕೆ ಹೋದಾಗ ಬೆಟ್ಟದ ಮೇಲೆ ಬಾಂಬ್ ಸ್ಫೋಟಿಸಿ ಪರಾರಿಯಾಗಿದ್ದ. ಆ.29 ರಂದು ಕನಿಕಲಬಂಡೆ ಹೊರವಲಯದಲ್ಲಿ ಪಂಪ್‌ಸೆಟ್‌ಗೆ ನಾಡಬಾಂಬ್ ಅಳವಡಿಸಿದ್ದು, ರೈತ ಕರಿಯಣ್ಣ ಮೋಟಾರ್ ಆನ್ ಮಾಡುತ್ತಿದ್ದಂತೆ ಸ್ಫೋಟಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು.

ಈ ಬೆನ್ನಲ್ಲೇ 5 ಲಕ್ಷ ಬೇಡಿಕೆಯ ಪತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಇದು ಉಪ್ಪಾರ ವೆಂಕಟೇಶ್‌ನ ತಂತ್ರವೇ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಈಗಲಾದರೂ ಪೊಲೀಸರು ಎಚ್ಚೆತ್ತುಕೊಂಡು ನಕ್ಸಲ್ ಚಟುವಟಿಕೆಗಳಿಗೆ ಸಂಪೂರ್ಣ ಬ್ರೇಕ್ ಹಾಕಿ, ತಾಲೂಕಿನ ಜನತೆ ನೆಮ್ಮದಿ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು ಎಂಬುದು ಜನರ ಒತ್ತಾಸೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !