September 12, 2026
Saturday, September 12, 2026
spot_img

ಜಾತಿ ನಿಂದನೆ, ಕಲ್ಲು-ಕಟ್ಟಿಗೆಯಿಂದ ಹಲ್ಲೆ, ಕೊ*ಲೆ ಯತ್ನ: ನಾಲ್ವರ ವಿರುದ್ಧ ಪ್ರಕರಣ ದಾಖಲು

ಹೊಸದಿಗಂತ ವರದಿ ಹಾವೇರಿ:

ಜಾತಿ ನಿಂದನೆ ಮಾಡಿ ಕಲ್ಲು, ಕಟ್ಟಿಗೆ ಹಾಗೂ ಹಂಚುಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪದಡಿ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ನಾಲ್ವರು ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ತಾಲೂಕಿನ ಕುರುಬಗೊಂಡ ಗ್ರಾಮದ ಸಮೀವುಲ್ಲಾ ತಂದೆ ನಜೀರಸಾಬ ರಾಣೇಬೆನ್ನೂರ, ದಾದಾಪೀರ ತಂದೆ ಜಮಾಲಸಾಬ ಅಂಗಡಿ ಹಾವೇರಿಯ ರೋಶನಜಮೀರ ತಂದೆ ಇಮಾಮಸಾಬ ಬಾಲೇಬಾಯಿ, ಬಾಬುಲಾಲ್ ತಂದೆ ಇಮಾಮಹುಸೇನ ಬಾಲೇಬಾಯಿ ಸೇರಿದಂತೆ ಇತರರ ಮೇಲೆ ದೂರಿ ದಾಖಲಾಗಿದೆ.

ಸೆ.11ರಂದು ಮಧ್ಯಾಹ್ನ ನೆಲೋಗಲ್- ಮೊಟೇಬೆನ್ನೂರು ನಡುವಿನ ರಾಷ್ಟ್ರೀಯ ಹೆದ್ದಾರಿ-48ರ ಸರ್ವಿಸ್ ರಸ್ತೆಯಲ್ಲಿ ಚಂದ್ರು ದೊಡಮನಿ (24) ಹಾಗೂ ಏಕಾಂತ ಹಾವೇರಿ (24) ಥಾರ್ ವಾಹನದಲ್ಲಿ ತೆರಳುತ್ತಿದ್ದಾಗ ಸಮೀವುಲ್ಲಾ ರಾಣೇಬೆನ್ನೂರು ಹಾಗೂ ದಾದಾಪೀರ ಅಂಗಡಿಗೆ ಬೈಕ್‌ನಲ್ಲಿ ಬಂದು ವಾಹನ ನಿಲ್ಲಿಸಿ ಜಗಳ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:

ಈ ವೇಳೆ ಚಂದ್ರು ದೊಡಮನಿ ಕೈಬೆರಳಿನಲ್ಲಿದ್ದ ಬಂಗಾರದ ಉಂಗುರ ಕಳೆದುಹೋಗಿದ್ದು, ಉಂಗುರ ಸಿಗದ ಹಿನ್ನೆಲೆಯಲ್ಲಿ ಎಲ್ಲರೂ ಸೇರಿ ಹುಡುಕಾಟ ಮಾಡಿದ್ದಾರೆ. ನಂತರ ಆರೋಪಿತರು ಸ್ವಲ್ಪ ಹಣ ನೀಡಿ ಉಳಿದದ್ದನ್ನು ಪೋನ್ ಪೇ ಮಾಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ಹಣ ನೀಡಿದ ವಿಚಾರವನ್ನು ಹಾವೇರಿಯಲ್ಲಿದ್ದ ರೋಶನಜಮೀರ ತಂದೆ ಇಮಾಮಸಾಬ ಬಾಲೇಬಾಯಿ, ಬಾಬುಲಾಲ್ ತಂದೆ ಇಮಾಮಹುಸೇನ ಬಾಲೇಬಾಯಿ ಸೇರಿದಂತೆ ಹಲವರಿಗೆ ತಿಳಿಸಿದ್ದಾರೆ.

ಸಂಜೆ ಶಿವಲಿಂಗ ನಗರದ 1ನೇ ಕ್ರಾಸ್ ಬಳಿ ಆರೋಪಿಗಳು ಗುಂಪಾಗಿ ಸೇರಿ ಚಂದ್ರು ಹಾಗೂ ಏಕಾಂತ ಮೇಲೆ ತೀವ್ರವಾದ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಕುರಿತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗಾಯಾಳುಗಳಾದ ಇಬ್ಬರಿಗೂ ತಕ್ಷಣ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !