ಹೊಸದಿಗಂತ ಡಿಜಿಟಲ್ ಡೆಸ್ಕ್:
BRICS ಯಾವುದೇ ರಾಷ್ಟ್ರದ ವಿರುದ್ಧ ಅಲ್ಲ. ಪರಸ್ಪರ ಅಭಿಪ್ರಾಯಗಳನ್ನು ಗೌರವಿಸಿ, ಒಮ್ಮತದ ಮೂಲಕ ಎಲ್ಲರನ್ನೂ ಒಳಗೊಂಡು ಮುಂದೆ ಸಾಗುವುದು ಸಂಘಟನೆಯ ಉದ್ದೇಶ. ಗ್ಲೋಬಲ್ ಸೌತ್ ಅನ್ನು ‘ರೂಲ್ ಟೇಕರ್’ ನಿಂದ ‘ರೂಲ್ ಮೇಕರ್’ಆಗಿ ಪರಿವರ್ತಿಸುವಲ್ಲಿ BRICS ಪ್ರಮುಖ ಪಾತ್ರ ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ 18ನೇ BRICS ಶೃಂಗಸಭೆಯಲ್ಲಿ ಮಾತನಾಡಿದ ಅವರು, ಜಾಗತಿಕ ಆಡಳಿತದಲ್ಲಿ ‘ಅಧಿಕಾರದ ಪಿರಮಿಡ್’ ಅನ್ನು ‘ಪಾಲುದಾರಿಕೆಯ ವೇದಿಕೆ’ಯಾಗಿ ಪರಿವರ್ತಿಸುವ ಅಗತ್ಯವಿದೆ ಎಂದರು.
ಜಾಗತಿಕ ಆಡಳಿತ ಸುಧಾರಣೆಗೆ 10 ಪ್ರಸ್ತಾವನೆ
ಜಾಗತಿಕ ಬಿಕ್ಕಟ್ಟುಗಳ ಪರಿಣಾಮವನ್ನು ನೇರವಾಗಿ ಎದುರಿಸುವ ಗ್ಲೋಬಲ್ ಸೌತ್ ರಾಷ್ಟ್ರಗಳು ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಮಾತ್ರ ಹಿಂಬದಿಯಲ್ಲಿವೆ ಎಂದು ಮೋದಿ ಹೇಳಿದರು. ಪ್ರತಿಯೊಂದು ದೇಶಕ್ಕೂ ಧ್ವನಿ, ಪ್ರತಿಯೊಬ್ಬ ಸದಸ್ಯನಿಗೂ ಪಾಲು ಇರುವ ವ್ಯವಸ್ಥೆ ರೂಪಿಸಬೇಕು. ಇದಕ್ಕಾಗಿ ಜಾಗತಿಕ ಆಡಳಿತ ಸುಧಾರಣೆಗೆ 10 ಪ್ರಸ್ತಾವನೆಗಳನ್ನು ರೂಪಿಸಿ, ಮುಂದಿನ BRICS ಶೃಂಗಸಭೆಯ ವೇಳೆಗೆ ಅವುಗಳನ್ನು ಸಮಗ್ರ ಸುಧಾರಣಾ ಮಾರ್ಗಸೂಚಿಯಾಗಿ ರೂಪಿಸುವಂತೆ ಮೋದಿ ಕರೆ ನೀಡಿದರು.
ಇದನ್ನೂ ಓದಿ:
BRICS ಅನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಜಾಗತಿಕ ಸಂಸ್ಥೆಗಳಲ್ಲೂ ಸುಧಾರಣೆ ತರಬೇಕು ಎಂದು ಪ್ರಧಾನಿ ಹೇಳಿದರು. ಪ್ರಸ್ತುತ ಜಾಗತಿಕ ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರ ಮತ್ತು ನಿರ್ಧಾರ ಕೈಗೊಳ್ಳುವ ಶಕ್ತಿ ಕೆಲವೇ ರಾಷ್ಟ್ರಗಳ ಬಳಿ ಕೇಂದ್ರೀಕೃತವಾಗಿದೆ. ಇದರ ಬದಲಾಗಿ ಇಂದಿನ ಆರ್ಥಿಕ ಹಾಗೂ ಜಾಗತಿಕ ವಾಸ್ತವಕ್ಕೆ ಅನುಗುಣವಾಗಿ ನಿರ್ಧಾರ ಪ್ರಕ್ರಿಯೆ ರೂಪುಗೊಳ್ಳಬೇಕು ಎಂದರು.
UNSC ಸುಧಾರಣೆ
ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಸುಧಾರಣೆಯನ್ನು ಇನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದರು. ಈ ಕುರಿತ ಮಾತುಕತೆಗಳಿಗೆ ನಿಗದಿತ ಕಾಲಮಿತಿ ಹಾಗೂ ಸ್ಪಷ್ಟ ಫಲಿತಾಂಶ ಇರಬೇಕು ಎಂದರು. ಜಾಗತಿಕ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುವ ರಾಷ್ಟ್ರಗಳಿಗೆ ಹಣಕಾಸು ಸಂಸ್ಥೆಗಳ ಮತದಾನ ಹಕ್ಕು, ನಾಯಕತ್ವ ಸ್ಥಾನಗಳು ಹಾಗೂ ನೀತಿ ರೂಪಿಸುವಿಕೆಯಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗಬೇಕು ಎಂದು ಪ್ರತಿಪಾದಿಸಿದರು.
ಹೊಸ, ಮಹತ್ವಾಕಾಂಕ್ಷೆಯ ಕಾರ್ಯಸೂಚಿ
ಮುಂದಿನ 20 ವರ್ಷಗಳಿಗಾಗಿ BRICS ಹೊಸ ಹಾಗೂ ಮಹತ್ವಾಕಾಂಕ್ಷೆಯ ಕಾರ್ಯಸೂಚಿ ರೂಪಿಸಬೇಕು ಎಂದ ಮೋದಿ, ಅಧ್ಯಕ್ಷತೆ ಪ್ರತಿವರ್ಷ ಬದಲಾಗುವುದರಿಂದ ಸಂಘಟನೆಯ ಕಾರ್ಯಗಳಲ್ಲಿ ನಿರಂತರತೆಗೆ ಧಕ್ಕೆಯಾಗಬಾರದು ಎಂದು ಹೇಳಿದರು. ಇದಕ್ಕಾಗಿ ‘BRICS Continuity and Implementation Mechanism’ ಸ್ಥಾಪಿಸುವ ಪ್ರಸ್ತಾಪವನ್ನೂ ಮುಂದಿಟ್ಟರು.



