ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಜೂನ್‌ನಲ್ಲಿ ರಾಜ್ಯಾದ್ಯಂತ ಮದರಸಾಗಳ ಸಮೀಕ್ಷೆಗೆ ಆದೇಶಿಸಿದ್ದರು. ಇದರ ಭಾಗವಾಗಿ ಪರಿಶೀಲನೆ ಪ್ರಕ್ರಿಯೆ ತೀವ್ರಗೊಂಡಿದ್ದು, ಮೊದಲ ಹಂತದಲ್ಲಿ 252 ಮದರಸಾಗಳನ್ನು ಮುಚ್ಚುವಂತೆ ಆದೇಶ ನೀಡಲಾಗಿದೆ.
ಅಷ್ಟೇ ಅಲ್ಲದೆ ನಿಯಮಾನುಸಾರ ಅನುಮತಿ ಹಾಗೂ ದಾಖಲೆಗಳನ್ನು ಸಲ್ಲಿಸುವಂತೆ ಇನ್ನೂ 100 ಮದರಸಾಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಖುದಿರಾಮ್ ಟುಡು ತಿಳಿಸಿದ್ದಾರೆ.
ಖಾರಿಜಿ ಪಂಥಕ್ಕೆ ಸೇರಿದ ಮದರಸಾ
ಪರಿಶೀಲನೆಯಲ್ಲಿ ಮುಚ್ಚುವ ಆದೇಶ ಎದುರಿಸುತ್ತಿರುವ 252 ಮದರಸಾಗಳಲ್ಲಿ ಬಹುತೇಕವು ಖಾರಿಜಿ ಪಂಥಕ್ಕೆ ಸೇರಿದವು ಎಂದು ವರದಿಯಾಗಿದೆ. ಈ ಪೈಕಿ ಮಾಲ್ದಾದಲ್ಲಿ 44, ಉತ್ತರ ದಿನಾಜ್‌ಪುರದಲ್ಲಿ 37, ದಕ್ಷಿಣ 24 ಪರಗಣಾಸ್‌ನಲ್ಲಿ 32 ಹಾಗೂ ನಾಡಿಯಾ ಮತ್ತು ಮುರ್ಷಿದಾಬಾದ್ ಜಿಲ್ಲೆಗಳಲ್ಲಿ ತಲಾ 25 ಮದರಸಾಗಳಿವೆ.
ಇದನ್ನೂ ಓದಿ:
ಶೋಕಾಸ್ ನೋಟಿಸ್ ಪಡೆದಿರುವ ಮದರಸಾಗಳು ಮಾನ್ಯ ಅನುಮತಿ, ನೋಂದಣಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಇಲ್ಲದಿದ್ದರೆ ಅವುಗಳ ವಿರುದ್ಧವೂ ಮುಚ್ಚುವ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಟುಡು ಎಚ್ಚರಿಸಿದ್ದಾರೆ.
22 ಜಿಲ್ಲೆಗಳಲ್ಲಿ ಸಮೀಕ್ಷೆ
ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಮದರಸಾ ಶಿಕ್ಷಣ ಇಲಾಖೆ ಕೋಲ್ಕತ್ತಾ ಸೇರಿದಂತೆ 22 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿ, ಆಡಳಿತ ವ್ಯವಸ್ಥೆ, ವಿದ್ಯಾರ್ಥಿಗಳ ದಾಖಲಾತಿ, ಹಣಕಾಸಿನ ಮೂಲಗಳು ಹಾಗೂ ನೋಂದಣಿ ಸ್ಥಿತಿಯನ್ನು ಪರಿಶೀಲಿಸಿದೆ.
ಸದ್ಯ ಬಂಗಾಳದಲ್ಲಿ 2,132 ಮದರಸಾಗಳು ಮಾನ್ಯ ಅನುಮತಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದರೆ, 2,396 ಮದರಸಾಗಳು ಅನುಮತಿ ಇಲ್ಲದೆ ನಡೆಯುತ್ತಿವೆ ಎಂದು ಸಚಿವರು ಹೇಳಿದ್ದಾರೆ.



