September 17, 2026
Thursday, September 17, 2026
spot_img

ಪಾಸಿಟಿವ್ ಟಾಕ್‌ಗೆ ಶರಣಾದ ಬಾಕ್ಸ್ ಆಫೀಸ್: ಟಾಪ್-5 ಲಿಸ್ಟ್‌ಗೆ ಎಂಟ್ರಿ ಕೊಟ್ಟ ‘ಹನುಮಾನ್ ಅಂಶ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದಲ್ಲಿ ಈಗ ‘ಹನುಮಾನ್ ಅಂಶ್’ ಸಿನಿಮಾದ್ದೇ ಚರ್ಚೆ. ಯಾವುದೇ ದೊಡ್ಡ ಸ್ಟಾರ್‌ಗಳಿಲ್ಲದೆ, ಬಿಗ್ ಬಜೆಟ್ ಇಲ್ಲದೆ ಸೈಲೆಂಟ್ ಆಗಿ ರಿಲೀಸ್ ಆಗಿದ್ದ ಈ ಭಕ್ತಿಪ್ರಧಾನ ಸಿನಿಮಾ, ಈಗ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 300 ಕೋಟಿ ಗಳಿಸಿ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದೆ.

ಮೊದಲ ಎರಡು ವಾರ ಈ ಸಿನಿಮಾನ ಯಾರೂ ಕ್ಯಾರೇ ಅಂದಿರಲಿಲ್ಲ. ಕೇವಲ 10 ಲಕ್ಷದ ಗಳಿಕೆಯೊಂದಿಗೆ ಓಪನಿಂಗ್ ಕಂಡಿದ್ದ ಸಿನಿಮಾ, ಮೊದಲ ಎರಡು ವಾರ ಸೇರಿ ಗಳಿಸಿದ್ದು ಬರೀ 1.50 ಕೋಟಿ ಮಾತ್ರ. ಆದರೆ ಆಮೇಲೆ ಶರುವಾಗಿದ್ದೇ ನೋಡಿ ರಿಯಲ್ ಮ್ಯಾಜಿಕ್. ಜನರಿಂದ ಜನರಿಗೆ ಹರಡಿದ ‘ಪಾಸಿಟಿವ್ ವರ್ಡ್ ಆಫ್ ಮೌತ್’ ಸಿನಿಮಾದ ದಿಕ್ಕನೇ ಬದಲಿಸಿಬಿಡ್ತು. ನಾಲ್ಕನೇ ವಾರದಿಂದಂತೂ ಪ್ರತಿಯೊಂದು ವಾರವೂ ಬರೋಬ್ಬರಿ 60 ಕೋಟಿಗೂ ಹೆಚ್ಚು ನೆಟ್ ಕಲೆಕ್ಷನ್ ಮಾಡ್ತಾ ಬಾಕ್ಸ್ ಆಫೀಸ್ ಸುನಾಮಿ ಎಬ್ಬಿಸಿತು.

ರಿಲೀಸ್ ಆಗಿ 41ನೇ ದಿನವೂ ಭಾರತದಲ್ಲಿ ದಿನಕ್ಕೆ 6 ಕೋಟಿ ನೆಟ್ ಕಲೆಕ್ಷನ್ ಮಾಡೋ ಮೂಲಕ ಒಟ್ಟು 237 ಕೋಟಿ ನೆಟ್ ಗಳಿಕೆ ಕಂಡಿದೆ. ಈ ಮೂಲಕ ‘ಧುರಂಧರ್ 2’, ‘ಬಾರ್ಡರ್ 2’ ಹಾಗೂ ‘ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾಗಳ ನಂತರ ಈ ವರ್ಷದ ಹೈಯೆಸ್ಟ್ ಗ್ರಾಸರ್ ಸಿನಿಮಾಗಳ ಲಿಸ್ಟ್‌ನಲ್ಲಿ 4ನೇ ಸ್ಥಾನಕ್ಕೇರಿದೆ. ಇತ್ತೀಚೆಗೆ ಬಂದ ‘ಮಿರ್ಜಾಪುರ್ ದಿ ಮೂವಿ’ಗಿಂತ 50 ಪಟ್ಟು ಹೆಚ್ಚು ಗಳಿಕೆ ಕಾಣ್ತಿರೋದು ಈ ಸಿನಿಮಾದ ಕ್ರೇಜ್‌ಗೆ ಸಾಕ್ಷಿ.

ಇತ್ತೀಚೆಗಷ್ಟೇ ಹೊಂಬಾಳೆ ಫಿಲ್ಮ್ಸ್ ಈ ಚಿತ್ರದ ಓವರ್‌ಸೀಸ್ ಹಕ್ಕುಗಳನ್ನು ಪಡೆದುಕೊಂಡು ವಿದೇಶಗಳಲ್ಲೂ ರಿಲೀಸ್ ಮಾಡಿದ್ದು, ಕೇವಲ 2 ವಾರದಲ್ಲೇ ಅಲ್ಲಿ 2 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿದೆ. ವರ್ಲ್ಡ್‌ವೈಡ್ ಗ್ರಾಸ್ ಕಲೆಕ್ಷನ್ 300 ಕೋಟಿ ಗಡಿ ದಾಟಿದೆ. ಅಕ್ಷಯ್ ಕುಮಾರ್ ಅವರ ‘ಭೂತ್ ಬಾಂಗ್ಲಾ’ ಸಿನಿಮಾದ ಲೈಫ್‌ಟೈಮ್ ರೆಕಾರ್ಡ್ ಮುರಿದಿರೋ ಹನುಮಾನ್ ಅಂಶ್, ಸದ್ಯದಲ್ಲೇ ಯಶ್ ಅಭಿನಯದ ‘ಟಾಕ್ಸಿಕ್’ ಹಾಗೂ ‘ಪೆದ್ದಿ’ ಸಿನಿಮಾಗಳನ್ನು ಹಿಂದಿಕ್ಕಿ 2026ರ ಟಾಪ್-5 ಅಥವಾ ಟಾಪ್-3 ಸಿನಿಮಾಗಳ ಸಾಲಿಗೆ ಸೇರುವುದು ಪಕ್ಕಾ ಎನ್ನಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !