ಹೊಸದಿಗಂತ ವರದಿ ಕಲಬುರಗಿ:
ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಿಗೆ ಸಂಬಂಧಿಸಿದ ಒಟ್ಟು ₹1,917.13 ಕೋಟಿ ಮೊತ್ತದ 940 ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಉದ್ಘಾಟನೆಗೊಂಡ ಹಾಗೂ ಶಂಕುಸ್ಥಾಪನೆಗೊಂಡ ಕಾಮಗಾರಿಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ವತಿಯಿಂದ ₹768.75 ಕೋಟಿ ಮೊತ್ತದ 687 ಕಾಮಗಾರಿಗಳು ಹಾಗೂ ವಿವಿಧ ಇಲಾಖೆಗಳ ವತಿಯಿಂದ ₹1,148.38 ಕೋಟಿ ಮೊತ್ತದ 253 ಕಾಮಗಾರಿಗಳು ಸೇರಿವೆ.
ಜಿಲ್ಲಾವಾರು ಅಂಕಿಅಂಶಗಳ ಪ್ರಕಾರ, ಬೀದರ ಜಿಲ್ಲೆಯಲ್ಲಿ ₹178.86 ಕೋಟಿ ಮೊತ್ತದ 74 ಕಾಮಗಾರಿಗಳು, ಕಲಬುರಗಿಯಲ್ಲಿ ₹1,105.63 ಕೋಟಿ ಮೊತ್ತದ 223 ಕಾಮಗಾರಿಗಳು, ಯಾದಗಿರಿಯಲ್ಲಿ ₹48.62 ಕೋಟಿ ಮೊತ್ತದ 72 ಕಾಮಗಾರಿಗಳು, ರಾಯಚೂರಿನಲ್ಲಿ ₹184.21 ಕೋಟಿ ಮೊತ್ತದ 213 ಕಾಮಗಾರಿಗಳು, ಕೊಪ್ಪಳದಲ್ಲಿ ₹258.03 ಕೋಟಿ ಮೊತ್ತದ 293 ಕಾಮಗಾರಿಗಳು, ಬಳ್ಳಾರಿಯಲ್ಲಿ ₹122.39 ಕೋಟಿ ಮೊತ್ತದ 42 ಕಾಮಗಾರಿಗಳು ಹಾಗೂ ವಿಜಯನಗರ ಜಿಲ್ಲೆಯಲ್ಲಿ ₹19.36 ಕೋಟಿ ಮೊತ್ತದ 23 ಕಾಮಗಾರಿಗಳು ಉದ್ಘಾಟನೆ ಮತ್ತು ಶಂಕುಸ್ಥಾಪನೆಗೊಂಡಿವೆ.
ಇದನ್ನೂ ಓದಿ:
ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ವತಿಯಿಂದ ₹33.35 ಕೋಟಿ ವೆಚ್ಚದಲ್ಲಿ ಖರೀದಿಸಲಾಗುತ್ತಿರುವ 56 ನೂತನ ಬಸ್ಸುಗಳ ಪೈಕಿ ಮೊದಲ ಹಂತದಲ್ಲಿ ಖರೀದಿಸಲಾದ 24 ಬಸ್ಸುಗಳಿಗೆ ಮುಖ್ಯಮಂತ್ರಿ ಹಸಿರು ನಿಶಾನೆ ತೋರಿದರು. ಈ ಬಸ್ಸುಗಳಲ್ಲಿ ‘ಮಿನಿ ಕಲ್ಯಾಣ ರಥ’, ‘ಅಮೋಘವರ್ಷ’ ಹಾಗೂ ‘ಎಕ್ಸಿಕ್ಯೂಟಿವ್ ಚೇರ್ ಕಾರ್’ ಮಾದರಿಯ ವಾಹನಗಳು ಸೇರಿವೆ.
ನಿಗಮವು ಒಟ್ಟು 20 ಹವಾ ನಿಯಂತ್ರಣ ರಹಿತ ಸ್ಲೀಪರ್ ಬಸ್, 20 ಎಸಿ ಸ್ಲೀಪರ್ ಬಸ್ ಹಾಗೂ 16 ಎಸಿ ಸೀಟರ್ ಬಸ್‌ಗಳನ್ನು ಖರೀದಿಸುತ್ತಿದ್ದು, ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೇವೆ ಒದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.



