ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತೆ ಯಶ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ‘ರಾಮಾಯಣ’ ಸಿನಿಮಾ ಬಗ್ಗೆ ಇಡೀ ದೇಶದಲ್ಲೇ ಭಾರೀ ಹೈಪ್ ಕ್ರಿಯೇಟ್ ಆಗಿದೆ. ಈ ಮಹಾಕಾವ್ಯ ಆಧರಿತ ಸಿನಿಮಾ 2026 ಹಾಗೂ 2027ರ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಎರಡು ಭಾಗಗಳಾಗಿ ದೊಡ್ಡ ಪರದೆಗೆ ಅಪ್ಪಳಿಸಲಿದೆ. ಇತ್ತೀಚೆಗಷ್ಟೇ ಗಣೇಶ ಚತುರ್ಥಿಯಂದು, ಚಿತ್ರತಂಡದಿಂದ ‘ಜೈ ಜೈ ರಾಮ್’ ಅನ್ನುವ ಭಕ್ತಿಗೀತೆಯನ್ನು ರಿಲೀಸ್ ಮಾಡಲಾಗಿತ್ತು.
ಈ ಭಕ್ತಿಪೂರ್ವಕ ಹಾಡಿಗೆ ಆಸ್ಕರ್ ವಿಜೇತ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಟ್ಯೂನ್ ಹಾಕಿದ್ದು, ಡಾ. ಕುಮಾರ್ ವಿಶ್ವಾಸ್ ಅವರ ಸಾಹಿತ್ಯವಿದೆ. ಇನ್ನು ಈ ಹಾಡಿಗೆ ಧ್ವನಿಯಾಗಿದ್ದು ಬೇರೆ ಯಾರೂ ಅಲ್ಲ, ಭಾರತೀಯ ಸಂಗೀತ ಲೋಕದ ಟಾಲೆಂಟೆಡ್ ಸಿಂಗರ್ ಅರ್ಜಿತ್ ಸಿಂಗ್ ಹಾಗೂ ಶ್ರೇಯಾ ಘೋಷಾಲ್. ಹಾಡು ರಿಲೀಸ್ ಆದಾಗಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ನಲ್ಲಿದೆ. ಆದರೆ, ಈ ಹಾಡಿನ ರೆಕಾರ್ಡಿಂಗ್ ವೇಳೆಯಲ್ಲಿ ನಡೆದ ಒಂದು ಕುತೂಹಲಕಾರಿ ವಿಷಯ ಈಗ ಹೊರಬಿದ್ದಿದೆ.
ಈ ‘ಜೈ ಜೈ ರಾಮ್’ ಹಾಡನ್ನು ಪರ್ಫೆಕ್ಟ್ ಆಗಿ ಹಾಡಲು ಗಾಯಕ ಅರ್ಜಿತ್ ಸಿಂಗ್ ಒಂದಲ್ಲ, ಎರಡಲ್ಲ… ಬರೋಬ್ಬರಿ 200 ಟೇಕ್ಗಳನ್ನು ತೆಗೆದುಕೊಂಡಿದ್ದಾರಂತೆ. ಸಾಮಾನ್ಯವಾಗಿ ಸೂಪರ್ ಸ್ಟಾರ್ ಗಾಯಕರು ಒಂದೆರಡು ಟೇಕ್ಗಳಲ್ಲಿ ಹಾಡು ಮುಗಿಸಿಬಿಡುತ್ತಾರೆ. ಆದರೆ ಅರ್ಜಿತ್ ಸಿಂಗ್ ವಿಷಯವೇ ಬೇರೆ. ರೆಕಾರ್ಡಿಂಗ್ ಮಾಡುತ್ತಿದ್ದಂತೆ ಅವರು ಶ್ರೀರಾಮನ ಭಕ್ತಿಯಲ್ಲಿ ಎಷ್ಟು ಲೀನವಾಗಿಹೋದರೆಂದರೆ, ಹಾಡುವುದನ್ನು ನಿಲ್ಲಿಸುವುದಕ್ಕೇ ಮನಸ್ಸಾಗಲಿಲ್ಲವಂತೆ. ಅಲ್ಲಿ ತಾಂತ್ರಿಕತೆ, ಶ್ರುತಿ, ಲಯ ಎನ್ನುವ ಗಡಿಗಳನ್ನು ಬದಿಗೊತ್ತಿ, ಸಂಪೂರ್ಣವಾಗಿ ಹಾಡಿನ ಭಾವನೆಗೆ ಶರಣಾಗಿ ಹಾಡಿದ್ದಾರೆ. ಪ್ರತಿಯೊಂದು ಟೇಕ್ನಲ್ಲೂ ಹಾಡಿನ ಆಳವನ್ನು ಹುಡುಕುತ್ತಾ ಭಕ್ತಿಪರವಶರಾಗಿದ್ದರಿಂದ ಇಷ್ಟೊಂದು ಟೇಕ್ಗಳು ಬೇಕಾದವು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಈ ಹಾಡಿನಲ್ಲಿ ‘ರಾಮಾಯಣ’ದ ಅದ್ಭುತ ಲೋಕದ ಸಣ್ಣ ದರುಶನವೂ ಸಿಕ್ಕಿದೆ. ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಕಂಗೊಳಿಸುತ್ತಿದ್ದರೆ, ಸೀತಾ ಮಾತೆಯಾಗಿ ಸಾಯಿ ಪಲ್ಲವಿ ಮನಸೋಲಿಸುವಂತೆ ನಟಿಸಿದ್ದಾರೆ. ಒಟ್ಟಿನಲ್ಲಿ, ಅರ್ಜಿತ್ ಸಿಂಗ್ ಅವರ ಈ ಡೆಡಿಕೇಶನ್ ಮತ್ತು ಎ.ಆರ್. ರೆಹಮಾನ್ ಅವರ ಸಂಗೀತ ಸೇರಿ ‘ರಾಮಾಯಣ’ ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೈಪ್ ಮಾಡುವಂತಾಗಿದೆ.



