September 22, 2026
Tuesday, September 22, 2026
spot_img

ಆರೋಗ್ಯ | ನಮ್ಮ ಕೈ- ಬಾಯಲ್ಲೇ ಇದೆ ಮೈ, ಮನಸ್ಸನ್ನು ಹಿಂಡಿಬಿಡುವ ಮಲಬದ್ಧತೆಯ ಜುಟ್ಟು!

ಮಾನವನ ದೇಹದ ಕಾರ್ಯ ಕ್ಷಮತೆಯೇ ಅಮೋಘ.

ಹೊರಗಿನ ವಸ್ತುವನ್ನು ಆಹಾರದ ರೂಪದಲ್ಲಿ ಸೇವಿಸಿದಾಗ ಅದನ್ನು ದೇಹದ ಭಾಗವಾಗಿ ಮಾಡಿ ಅದರಲ್ಲಿರುವ ಬೇಡವಾದ ಅಂಶಗಳನ್ನು, ಜೀರ್ಣ ಕ್ರಿಯೆಯಲ್ಲಿ ಉತ್ಪತ್ತಿಯಾಗುವ ಕಿಟ್ಟವನ್ನು ಮಲದ ರೂಪದಲ್ಲಿ ದೇಹ ವಿಸರ್ಜನೆ ಮಾಡುತ್ತದೆ. ಇದೊಂದು ರೀತಿಯ ನಿತ್ಯ ಶುದ್ಧೀಕರಣ, ಇದು ಸರಿಯಾದ ರೀತಿ ಕೆಲಸ‌ ಮಾಡದಿದ್ದಾಗಲೇ ಶುರುವಾಗುತ್ತದೆ ಮಲಬದ್ಧತೆ ಸಮಸ್ಯೆ!
ಮಲಬದ್ದತೆಯನ್ನು ಶೀಘ್ರವಾಗಿ ಪರಿಹರಿಸಿ ಕೊಳ್ಳುವುದು ಅಗತ್ಯ ಆದರೆ ಹೇಗೆ? ಇದಕ್ಕೆ ಕಾರಣ ಏನು ಎಂಬ ಬಗ್ಗೆ‌ ಡಾ॥ ಸುಹಾಸ್ ಹೆಚ್. ಡಿ. ಅವರು ಇಲ್ಲಿ ನಮ್ಮ ಓದುಗರಿಗಾಗಿ ವಿವರಿಸಿದ್ದಾರೆ….

ಮಲಬದ್ಧತೆಗೆ ಕಾರಣಗಳು ಹಲವು, ಅವುಗಳಲ್ಲಿ‌ ಮುಖ್ಯವಾದ್ದು ಆಹಾರದ ಕಾರಣಗಳು

ಕೆಲವು ಆಹಾರಗಳು ಸಹಜವಾಗಿಯೇ ಮಲಬದ್ದತೆಯನ್ನು ಉಂಟು ಮಾಡುತ್ತವೆ ಅದರಲ್ಲೂ ಈಗ ಸಿಗುವ ಬೇಕರಿ ಪದಾರ್ಥಗಳು ಮೈದಾ ಹಿಟ್ಟಿನಿಂದ ಮಾಡಿದ ಪದಾರ್ಥಗಳು, ಬಿಸ್ಕೆಟ್‌ಗಳು ಮಲಬದ್ದತೆಗೆ ದೊಡ್ಡ ಕೊಡುಗೆ ನೀಡುತ್ತವೆ.

ವಿಹಾರಜ ಕಾರಣಗಳು:
ಸ್ವಾಭಾವಿಕವಾಗಿ ಬರುವ ಮಲದ ವೇಗವನ್ನು ಧಾರಣೆ ಮಾಡುವುದು, ರಾತ್ರಿ ನಿದ್ದೆ ಬಿಡುವುದು
ಅಜೀರ್ಣ:
ವಿಷಮವಾದ ಆಹಾರ ಕ್ರಮಗಳಿಂದ ಅಜೀರ್ಣ ಉಂಟಾಗಿ ಅದರ ಪರಿಣಾಮವಾಗಿ ಮಲಬದ್ದತೆ ಉಂಟಾಗುತ್ತದೆ. ದೀರ್ಘಕಾಲೀನವಾದ ಅಜೀರ್ಣವು ಮಲಬದ್ಧತೆಯೊಂದಿಗೆ ಇನ್ನು ಹಲವು ರೋಗಗಳನ್ನು ಉಂಟು ಮಾಡುತ್ತದೆ.
ಕ್ರೂರ ಕೋಷ್ಠ:
ಕೆಲವರಲ್ಲಿ ಆಹಾರ ಕ್ರಮ ಸರಿಯಿದ್ದರೂ, ಹಿತವಾದ ಆಹಾರಗಳನ್ನೇ ಸೇವಿಸುತ್ತಿದ್ದರೂ ಮಲಬದ್ದತೆ ಕಾಡಬಹುದು ಇದಕ್ಕೆ ಕಾರಣ ಸ್ವಭಾವತಃ ಇರುವಂತಹ ಕ್ರೂರ ಕೋಷ್ಠ ಅಂದರೆ ಕರುಳಿನಲ್ಲಿ ಸಹಜವಾಗಿಯೇ ಸ್ನೇಹಾಂಶ ಕಡಿಮೆ ಇರುವುದರಿಂದ ಉತ್ಪತ್ತಿಯಾದ ಮಲವು ಸರಾಗವಾಗಿ ಚಲಿಸಲು ಸಾಧ್ಯವಾಗದೇ ಮಲಬದ್ದತೆ ಉಂಟಾಗುತ್ತದೆ.

ಮಲಬದ್ಧತೆಯಿಂದಾಗುವ ಉಪದ್ರವಗಳು:

ನಿತ್ಯ ಶೋಧನ ಇಲ್ಲದಿರುವುದರಿಂದ ದೇಹದಲ್ಲಿ ದೋಷಗಳ ಸಂಚಯವಾಗುತ್ತದೆ ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

ತಕ್ಷಣದ ತೊಂದರೆಗಳು: ಹೊಟ್ಟೆ ಉಬ್ಬರ, ಹಸಿವು ಕಡಿಮೆ ಆಗುವುದು, ತಲೆನೋವು ಉಂಟಾಗುವುದು, ಕಾಲಿನ ಮಾಂಸಖಂಡಗಳ ಸೆಳೆತ.
ದೀರ್ಘಕಾಲಿನ ಪರಿಣಾಮ:
ಮೂಲವ್ಯಾಧಿ, ಫಿಸ್ಟುಲಾ, ಹೃದ್ರೋಗ, ಮೈಗ್ರೇನ್, ಚರ್ಮ ರೋಗಗಳು ಹೀಗೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ
ಪರಿಹಾರ:
ಬೇಕರಿ ಹಾಗು ಮೈದಾ ಹಿಟ್ಟಿನ ತಿನಿಸುಗಳನ್ನು ಪೂರ್ಣವಾಗಿ ಬಿಡುವುದು
ನಿತ್ಯ ಕನಿಷ್ಠ ಒಂದು ಗಂಟೆ ವ್ಯಾಯಾಮ ಅಥವಾ ಚಂಕ್ರಮಣ

ಅಜೀರ್ಣವಿದ್ದಲ್ಲಿ ಅದಕ್ಕೆ ಸೂಕ್ತ ಚಿಕಿತ್ಸೆ

ಪ್ರತಿದಿನ ಒಂದು ಚಮಚ ಹಸುವಿನ ತುಪ್ಪ ಅಥವಾ ಕೊಬ್ಬರಿ ಎಣ್ಣೆಯನ್ನು ಆಹಾರದ ಜೊತೆ ಸೇವಿಸುವುದು ಕರುಳಿನಲ್ಲಿ ಸ್ನೇಹಾಂಶವನ್ನು ಹೆಚ್ಚು ಮಾಡಲು ಸಹಕಾರಿ ಆಗಿದೆ
ಹರೀತಕಿ ಕಷಾಯ: ಹರೀತಕಿ ಫಲವನ್ನು ಕಷಾಯ ಮಾಡಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಲಬದ್ಧತೆಯಿಂದ ತಾತ್ಕಾಲಿಕ ಪರಿಹಾರ ಸಿಗುತ್ತದೆ.

(ಲೇಖಕರಾದ ಡಾ. ಸುಹಾಸ್ ಹೆಚ್. ಡಿ. ಅವರು ಶ್ರೀ ಶಾರದಾ ಧನ್ವಂತರಿ ಆಯುರ್ವೇದ ಆಸ್ಪತ್ರೆ, ಶೃಂಗೇರಿಯ ಮುಖ್ಯ ವೈದ್ಯಾಧಿಕಾರಿಗಳು.)

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !