ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಈ ಹಿಂದೆ ಕೇಂದ್ರ ತನಿಖಾ ದಳ ಪ್ರಕರಣದ ತನಿಖೆ ನಡೆಸಿದ್ದು, ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಸೌಜನ್ಯಾ ತಾಯಿ ಕುಸುಮಾವತಿ ಗೌಡ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು. ಹೈ ಕೋರ್ಟ್ ಕೂಡ ಈ ಅರ್ಜಿಯನ್ನು ವಜಾಗೊಳಿಸಿತ್ತು.
ತದನಂತರ ಕುಸುಮಾವತಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ವೀಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ವೇಳೆ ಸಿಬಿಐ ತನಿಖೆ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಜುಲೈನಲ್ಲಿ ನಡೆದ ವಿಚಾರಣೆ ತನಿಖೆ ಕಳಪೆಯಾಗಿದೆ. ಇಲ್ಲಿ ಸ್ವತಂತ್ರ ತನಿಖೆ ಆಗಿಲ್ಲ. ಹಿಂದಿನ ತನಿಖೆಯನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದೆ ಎಂದು ಹೇಳಿತ್ತು.
ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಸಂಜೀವ್ ಸಚ್‌ದೇವ್ ಅವರಿದ್ದ ಪೀಠ, ‘ವಾಸ್ತವವಾಗಿ, ಸಿಬಿಐನ ತನಿಖಾಧಿಕಾರಿ ನ್ಯಾಯಾಧೀಶರಂತೆ ಕಾರ್ಯನಿರ್ವಹಿಸಿದ್ದಾರೆ. ಈ ಹಿಂದೆ ಸಂಗ್ರಹಿಸಲಾದ ಸಾಕ್ಷ್ಯಗಳನ್ನು ಪರಿಶೀಲಿಸಿ ಅವರು ವರದಿ ಸಲ್ಲಿಸಿದ್ದಾರೆ. ಯಾವುದೇ ಸ್ವತಂತ್ರ ತನಿಖೆ ನಡೆಸಿಲ್ಲ’ ಎಂದು ಹೇಳಿತ್ತು. ಇದೀಗ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ಸುಪ್ರೀಂ ಕೋರ್ಟ್, ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸುವಂತೆ ಸೂಚಿಸಿದೆ.



