ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಬ್ಬದ ಸಲುವಾಗಿ ಕೆರೆಯಲ್ಲಿ ಸ್ನಾನಕ್ಕೆ ತೆರಳಿದ್ದ ಆರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ನಡೆದಿದೆ.
ಸುಲ್ತಾನ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ತರೈಟಾ ಬಹಿಯಾರ್ ಪ್ರದೇಶದಲ್ಲಿ ಬೆಳಗ್ಗೆ ಈ ಘಟನೆ ಸಂಭವಿಸಿದೆ. ಹಬ್ಬದ ಆಚರಣೆಯ ಭಾಗವಾಗಿ ಮಕ್ಕಳು ಕೆರೆಗೆ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ಮಕ್ಕಳು ಆಳವಾದ ನೀರಿಗೆ ಇಳಿದಿದ್ದು, ಓರ್ವ ಅಪಾಯಕ್ಕೆ ಸಿಲುಕಿದಾಗ ಉಳಿದವರು ಆತನನ್ನು ರಕ್ಷಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಪ್ರಯತ್ನವೇ ದುರಂತಕ್ಕೆ ಕಾರಣವಾಗಿದ್ದು, ಆರು ಮಕ್ಕಳು ನೀರಿನಲ್ಲಿ ಮುಳುಗಿದ್ದಾರೆ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.
ಮೃತರನ್ನು ಪೂಜಾ ಕುಮಾರಿ (13), ರಾಹುಲ್ ಕುಮಾರ್ (14), ವಿಕಾಸ್ ಕುಮಾರ್ (13), ಆಯುಷ್ ಕುಮಾರ್ (12), ಮೀನಾಕ್ಷಿ ಕುಮಾರಿ ಅಲಿಯಾಸ್ ಮಿಂಕಿ (12) ಹಾಗೂ ಜ್ಯೋತಿ ಕುಮಾರಿ (14) ಎಂದು ಗುರುತಿಸಲಾಗಿದೆ. ಮೃತರಲ್ಲಿ ಮೂವರು ಬಾಲಕಿಯರು ಸೇರಿದ್ದಾರೆ.
ಇದನ್ನೂ ಓದಿ:
ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಮಕ್ಕಳನ್ನು ಕೆರೆಯಿಂದ ಹೊರತೆಗೆದು ಸುಲ್ತಾನ್ಗಂಜ್ ರೆಫರಲ್ ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ಪರೀಕ್ಷಿಸಿದ ಬಳಿಕ ಆರು ಮಂದಿಯೂ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಮೃತ ಮಕ್ಕಳ ಕುಟುಂಬಗಳಿಗೆ ಅಗತ್ಯ ನೆರವು ಒದಗಿಸಲಾಗುವುದು ಹಾಗೂ ನಿಯಮಾನುಸಾರ ಪರಿಹಾರ ನೀಡುವ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಬ್ಬದ ಸಂಭ್ರಮದಿಂದ ಆರಂಭವಾದ ದಿನ ಆರು ಮಕ್ಕಳ ದಾರುಣ ಸಾವಿನಿಂದ ಅಂತ್ಯಗೊಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.



