September 22, 2026
Tuesday, September 22, 2026
spot_img

ದೆಹಲಿಯಲ್ಲಿ ಅಮಾನುಷ ಕೃತ್ಯ: ಪೊಲೀಸರ ಸೋಗಿನಲ್ಲಿ ಬಂದು ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಓರ್ವ ಅರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷತೆಯೇ ಇಲ್ಲದಂತಾಗಿದೆ. ದಕ್ಷಿಣ ದೆಹಲಿಯ ಕಲ್ಕಾಜಿ ಮಂದಿರದ ಬಳಿಯಿರುವ ಉದ್ಯಾನವನದಲ್ಲಿ 17 ವರ್ಷದ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಪೊಲೀಸರ ಸೋಗಿನಲ್ಲಿ ಬಂದ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನುಷ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಯನ್ನು ಇದೀಗ ಪೊಲೀಸರು ಜೈಲಿಗಟ್ಟಿದ್ದಾರೆ.

ಏನಿದು ಘಟನೆ?

ಸಂತ್ರಸ್ತ ಬಾಲಕಿ ಸೋಮವಾರ ಸಂಜೆ 7 ಗಂಟೆಯ ಸುಮಾರಿಗೆ ತನ್ನ ಸ್ನೇಹಿತನೊಂದಿಗೆ ಕಲ್ಕಾಜಿ ದೇವಸ್ಥಾನಕ್ಕೆ ಬಂದಿದ್ದಳು. ದರುಶನ ಮುಗಿಸಿ ಅವರಿಬ್ಬರೂ ದೇವಸ್ಥಾನದ ಪಕ್ಕದಲ್ಲೇ ಇದ್ದ ಪಾರ್ಕ್‌ನಲ್ಲಿ ಕುಳಿತಿದ್ದಾಗ, 25 ರಿಂದ 30 ವರ್ಷ ಪ್ರಾಯದ ಮೂವರು ಅಪರಿಚಿತರು ಇವರನ್ನು ತಡೆದಿದ್ದಾರೆ. ʼನಾವು ಪೊಲೀಸರುʼ ಎಂದ ಆ ಕಿರಾತಕರು, ಇಬ್ಬರನ್ನೂ ಬೆದರಿಸಿದ್ದಾರೆ.

ಬಳಿಕ ಆರೋಪಿಗಳು ಚಾಕು ಹಾಗೂ ಗನ್ ತೋರಿಸಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ನಂತರ ʼಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ನಿಮ್ಮನ್ನು ಸುಮ್ಮನೆ ಬಿಡಲ್ಲʼ ಎಂದು ಕೊಲೆ ಬೆದರಿಕೆ ಹಾಕಿ ಕಾಮುಕರು ಅಲ್ಲಿಂದ ಓಡಿಹೋಗಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸ್ ಶೂಟೌಟ್, ಆರೋಪಿ ಸೆರೆ

ರಾತ್ರಿ 8:45 ರ ಸುಮಾರಿಗೆ ಸಂತ್ರಸ್ತರಿಂದ ಕರೆ ಬಂದ ತಕ್ಷಣ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಆರೋಪಿಗಳ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದ್ದಾರೆ.

ಇದನ್ನೂ ಓದಿ:

ಖಚಿತ ಮಾಹಿತಿ ಮೇರೆಗೆ ಅಮರ್ ಕಾಲೋನಿಯ ರಸ್ತೆಯ ಬಳಿ ಪೊಲೀಸರು ಬಲೆ ಬೀಸಿದಾಗ ಪ್ರಮುಖ ಆರೋಪಿ ಅಸೀಫ್ ಸಿಕ್ಕಿಬಿದ್ದಿದ್ದಾನೆ. ಆದರೆ, ಪೊಲೀಸರಿಂದ ತಪ್ಪಿಸಿಕೊಳ್ಳಲು ಆತ ಮೂರು ಸುತ್ತು ಗುಂಡಿನ ದಾಳಿ ನಡೆಸಿದ್ದಾನೆ. ತಕ್ಷಣವೇ ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಆರೋಪಿಯ ಬಲಗಾಲಿಗೆ ಗುಂಡು ತಗುಲಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಅಸೀಫ್ ಓಖ್ಲಾ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಸದ್ಯ ಪೊಲೀಸರು ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತಲೆಮರೆಸಿಕೊಂಡಿರುವ ಇನ್ನುಳಿದ ಇಬ್ಬರು ಕಾಮುಕರ ಪತ್ತೆಗಾಗಿ ಬಲೆ ಬೀಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !