ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಾಗಲೇ ದಿನ ಬಳಕೆ ವಸ್ತುಗಳ ದರ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನಸಾಮಾನ್ಯರಿಗೆ ಅಕ್ಕಿ ದರ ದಿಢೀರ್ ಹೆಚ್ಚಳವಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಾರುಕಟ್ಟೆಯಲ್ಲಿ ಕೇವಲ ಒಂದೇ ತಿಂಗಳ ಅವಧಿಯಲ್ಲಿ ಸತತ ಎರಡನೇ ಬಾರಿಗೆ ಅಕ್ಕಿ ಬೆಲೆ ಜಿಗಿತ ಕಂಡಿದ್ದು, ಕಳೆದ ಒಂದು ವಾರದಿಂದಲೂ ಈ ಏರಿಕೆ ಪ್ರಕ್ರಿಯೆ ನಿರಂತರವಾಗಿ ಮುಂದುವರಿದಿದೆ.
ಗ್ರಾಹಕರು ಹೆಚ್ಚಾಗಿ ಬಳಸುವ ಕೋಲಂ ತಳಿಯ ಅಕ್ಕಿ ಬೆಲೆಯು ಪ್ರತಿ ಕೆಜಿಗೆ ಇದ್ದ 75 ರೂ.ಯಿಂದ ನೇರವಾಗಿ 100 ರೂ.ಗೆ ತಲುಪಿದೆ. ಕೇವಲ ಕೋಲಂ ಮಾತ್ರವಲ್ಲದೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುತೇಕ ಎಲ್ಲಾ ಗುಣಮಟ್ಟದ ಅಕ್ಕಿ ತಳಿಗಳ ಬೆಲೆಯಲ್ಲೂ ಗಣನೀಯ ಏರಿಕೆ ದಾಖಲಾಗಿದೆ. ನಾಲ್ಕು ದಿನಗಳ ಹಿಂದಷ್ಟೇ 180 ರೂ. ಆಸುಪಾಸಿನಲ್ಲಿದ್ದ ಪ್ರೀಮಿಯಂ ಗುಣಮಟ್ಟದ ಅಕ್ಕಿಯ ದರ ಈಗ 200 ರೂ.ಗೆ ಬಂದು ನಿಂತಿದೆ.
ಏರಿಕೆಗೆ ಕಾರಣವೇನು?
ಹವಾಮಾನ ವೈಪರೀತ್ಯ ಹಾಗೂ ಮಳೆಯ ಅಭಾವದಿಂದಾಗಿ ಈ ಬಾರಿ ಭತ್ತದ ಇಳುವರಿ ಗಣನೀಯವಾಗಿ ಕುಸಿದಿದೆ. ಇದು ಮಾರುಕಟ್ಟೆಗೆ ಅಕ್ಕಿ ಪೂರೈಕೆಯ ಮೇಲೆ ತೀವ್ರ ಪರಿಣಾಮ ಬೀರಿದ್ದು, ದರ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ವರ್ತಕರು ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲೇ ರಾಜ್ಯದಲ್ಲಿ ಅಕ್ಕಿ ದರ ಮೊದಲ ಬಾರಿ ಏರಿಕೆ ಕಂಡಿತ್ತು. ಆಗ ಸಾಮಾನ್ಯ ಅಕ್ಕಿಯ ಮೇಲೆ ಕೆಜಿಗೆ 5 ರಿಂದ 10 ರೂ. ಹಾಗೂ ಉತ್ತಮ ಗುಣಮಟ್ಟದ ಅಕ್ಕಿಯ ಮೇಲೆ 10 ರಿಂದ 20 ರೂ.ಯಷ್ಟು ದರ ಹೆಚ್ಚಳವಾಗಿತ್ತು. ಕ್ವಿಂಟಲ್ ಲೆಕ್ಕದಲ್ಲಿ ನೋಡುವುದಾದರೆ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ಬರೋಬ್ಬರಿ 1,000 ರೂ. ಹೆಚ್ಚಾಗಿತ್ತು. ಚೀಲಗಳ ಆಧಾರದಲ್ಲಿ ಸಾಮಾನ್ಯ ಅಕ್ಕಿ ಮೂಟೆಗೆ 200 ರೂ. ಹಾಗೂ ಬ್ರ್ಯಾಂಡೆಡ್ ಅಕ್ಕಿ ಮೂಟೆಗೆ 250 ರಿಂದ 300 ರೂ.ಯಷ್ಟು ಹೊರೆ ಗ್ರಾಹಕರ ಮೇಲೆ ಬಿದ್ದಿತ್ತು.
ಇದನ್ನೂ ಓದಿ:
ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿಯಾಗುವ ಆತಂಕ
ರಾಜ್ಯದ ಹಲವು ಭಾಗಗಳಲ್ಲಿ ಸಕಾಲಕ್ಕೆ ಮಳೆಯಾಗದ ಕಾರಣ ರೈತರು ಬೆಳೆದ ಭತ್ತದ ಬೆಳೆಗೆ ಸಮರ್ಪಕವಾಗಿ ನೀರು ಸಿಕ್ಕಿಲ್ಲ. ಇದರಿಂದಾಗಿ ಕಟಾವಿನ ಹಂತದಲ್ಲಿ ಬೆಳೆಗಳು ಒಣಗಿ ಹೋಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಭತ್ತ ಮಾರುಕಟ್ಟೆಗೆ ಬರುತ್ತಿಲ್ಲ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಮುಂಬರುವ ದಿನಗಳಲ್ಲಿ ಅಕ್ಕಿ ದರ ಮತ್ತಷ್ಟು ಗಗನಕ್ಕೇರುವ ಆತಂಕ ಎದುರಾಗಿದ್ದು, ಮಧ್ಯಮ ಮತ್ತು ಬಡ ವರ್ಗದ ಕುಟುಂಬಗಳ ಬಜೆಟ್ ಸಂಪೂರ್ಣ ಏರುಪೇರಾಗುವ ಭೀತಿ ಎದುರಾಗಿದೆ.



