ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವಾಗಲೂ ಬಿಜೆಪಿ ವಿರುದ್ಧ ‘ಮತ ಕಳ್ಳತನ’ದ ಆರೋಪ ಮಾಡುವ ಕಾಂಗ್ರೆಸ್ ಪಕ್ಷವೇ ಈಗ ʼಪ್ರಜಾಪ್ರಭುತ್ವದ ಕಳ್ಳತನʼದಲ್ಲಿ ಭಾಗಿಯಾಗಿದೆ ಎಂದು ಬಿಜೆಪಿ ಗಂಭೀರವಾಗಿ ಆರೋಪಿಸಿದೆ. ದೆಹಲಿಯ ವಿಶೇಷ ನ್ಯಾಯಾಲಯವು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ವಿರುದ್ಧದ ವೋಟರ್ ಲಿಸ್ಟ್ ಅಕ್ರಮಕ್ಕೆ ಸಂಬಂಧಿಸಿದ ಅರ್ಜಿಯನ್ನು ಮರುವಿಚಾರಣೆಗೆ ಒಪ್ಪಿಕೊಂಡ ಬೆನ್ನಲ್ಲೇ ಬಿಜೆಪಿ ಈ ವಾಗ್ದಾಳಿ ನಡೆಸಿದೆ.
ಭಾರತದ ಪೌರತ್ವವೇ ಇಲ್ಲದಿದ್ದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು 1980ರ ಚುನಾವಣೆಯಲ್ಲಿ ಹೇಗೆ ಮತ ಚಲಾಯಿಸಲು ಸಾಧ್ಯವಾಯಿತು ಎಂದು ಬಿಜೆಪಿ ಪ್ರಶ್ನಿಸಿದೆ.
ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಆಕ್ರೋಶ
ಈ ಬಗ್ಗೆ ದೆಹಲಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, 1980ರಲ್ಲಿ ಸೋನಿಯಾ ಗಾಂಧಿ ಅವರು ಭಾರತದ ಪೌರತ್ವವನ್ನೇ ಹೊಂದಿರಲಿಲ್ಲ. ಪೌರತ್ವ ಇಲ್ಲದ ವ್ಯಕ್ತಿಯೊಬ್ಬರು ಮತದಾರರ ಪಟ್ಟಿಗೆ ಹೆಸರು ಸೇರಿಸಿ, ವೋಟ್ ಹಾಕಲು ಹೇಗೆ ಸಾಧ್ಯವಾಯಿತು? ಇದಕ್ಕಾಗಿ ಅವರು ನಕಲಿ ದಾಖಲೆಗಳನ್ನು ಸೃಷ್ಟಿಸಲು ಯತ್ನಿಸಿದ್ದರೇ? ಇದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ವಿಶೇಷ ನ್ಯಾಯಾಲಯದ ಆದೇಶವೇನು?
ಸೋನಿಯಾ ಗಾಂಧಿ ಅವರ ವಿರುದ್ಧದ ದೂರಿನ ಮೇಲೆ ಎಫ್ಐಆರ್ ದಾಖಲಿಸಲು ನಿರಾಕರಿಸಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ವಿಶೇಷ ನ್ಯಾಯಾಲಯವು ರದ್ದುಗೊಳಿಸಿದೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಯಾವುದೇ ಸರಿಯಾದ ಯೋಚನೆ ಮಾಡದೆ ಮತ್ತು ದೂರಿನಲ್ಲಿರುವ ಗಂಭೀರ ಕಾನೂನು ಉಲ್ಲಂಘನೆಯ ಅಂಶಗಳನ್ನು ಗಮನಿಸದೆ ಅರ್ಜಿಯನ್ನು ವಜಾಗೊಳಿಸಿದೆ ಎಂದು ವಿಶೇಷ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಕೇವಲ ಪರಿಶೀಲಿಸದ ಫೋಟೋಕಾಪಿಗಳ ಆಧಾರದ ಮೇಲೆ ದೂರನ್ನು ತಿರಸ್ಕರಿಸಿದ್ದು ತಪ್ಪು ಎಂದು ಕೋರ್ಟ್ ಕಟುವಾಗಿ ಟೀಕಿಸಿದೆ.
ಏನಿದು ವೋಟರ್ ಲಿಸ್ಟ್ ವಿವಾದ?
ಸೋನಿಯಾ ಗಾಂಧಿ ಅವರು ಏಪ್ರಿಲ್ 1983ರಲ್ಲಿ ಭಾರತದ ಅಧಿಕೃತ ಪೌರತ್ವವನ್ನು ಪಡೆದುಕೊಂಡಿದ್ದರು. ಆದರೆ, ಅದಕ್ಕೂ ಮುನ್ನ ಅಂದರೆ 1980ರಲ್ಲೇ ದೆಹಲಿಯ ಸಫ್ದರ್ಜಂಗ್ ರಸ್ತೆಯ ವಿಳಾಸದ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಯಾಗಿತ್ತು ಎಂಬುದು ಪ್ರಮುಖ ಆರೋಪವಾಗಿದೆ. ಆ ಬಳಿಕ 1982ರಲ್ಲಿ ಅವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು ಮತ್ತು ಪೌರತ್ವ ಸಿಕ್ಕ ನಂತರ 1983ರಲ್ಲಿ ಮತ್ತೆ ಸೇರಿಸಲಾಗಿತ್ತು ಎಂಬ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ.
ಇದನ್ನೂ ಓದಿ:
ಸೆ. 29 ಕ್ಕೆ ಮರುವಿಚಾರಣೆ
ವಿಶೇಷ ನ್ಯಾಯಾಲಯವು ಈ ಇಡೀ ಪ್ರಕರಣವನ್ನು ವ್ಯವಸ್ಥಿತವಾಗಿ ಮರುಪರಿಶೀಲಿಸುವಂತೆ ಕೆಳಹಂತದ ನ್ಯಾಯಾಲಯಕ್ಕೆ ಸೂಚಿಸಿದೆ. ʼಮೇಲ್ಮನವಿ ನ್ಯಾಯಾಲಯವು ಮ್ಯಾಜಿಸ್ಟ್ರೇಟ್ ಕೋರ್ಟ್ನ ಕೆಲಸವನ್ನು ತಾನೇ ಮಾಡಲು ಸಾಧ್ಯವಿಲ್ಲ. ಹೀಗಾಗಿ ಪ್ರಕರಣವನ್ನು ಮರಳಿ ಕೆಳ ನ್ಯಾಯಾಲಯಕ್ಕೆ ಕಳುಹಿಸಲಾಗುತ್ತಿದ್ದು, ಸಂಬಂಧಪಟ್ಟ ಪೊಲೀಸ್ ಅಧಿಕಾರಿಯಿಂದ ತನಿಖಾ ಸ್ಥಿತಿಗತಿ ವರದಿಯನ್ನು ತರಿಸಿಕೊಂಡು, ವಾದ ಆಲಿಸಿದ ನಂತರ ತೀರ್ಪು ನೀಡಬೇಕುʼ ಎಂದು ವಿಶೇಷ ನ್ಯಾಯಾಧೀಶರು ಆದೇಶಿಸಿದ್ದಾರೆ.
ಈ ಪ್ರಕರಣವು ಈಗ ಮತ್ತೆ ರೌಸ್ ಅವೆನ್ಯೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮರಳಿದ್ದು, ಸೆ. 29 ರಂದು ಪೊಲೀಸರ ವರದಿ ಸಲ್ಲಿಕೆಯಾದ ಬಳಿಕ ಕೋರ್ಟ್ ಈ ಬಗ್ಗೆ ಅಂತಿಮ ಆದೇಶ ಪ್ರಕಟಿಸಲಿದೆ



