ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ಪಾತ್ರ, ಒಂದು ಸಿನಿಮಾ, ಒಂದು ಪ್ರಶಸ್ತಿ… ಆದರೆ ಅದರ ಹಿಂದೆ ನಿಂತಿರುವುದು ದಶಕಗಳ ಕಲಾ ಪಯಣ. ‘ಬ್ರಹ್ಮಯುಗಂ’ನ ಕೊಡುಮೋನ್ ಪೊಟ್ಟಿಯಾಗಿ ಪ್ರೇಕ್ಷಕರನ್ನು ಬೆಚ್ಚಿಬೀಳಿಸಿದ ಮಮ್ಮುಟ್ಟಿಯ ಅಭಿನಯಕ್ಕೆ ಇದೀಗ ರಾಷ್ಟ್ರಮಟ್ಟದ ಗೌರವ ದೊರೆತಿದೆ.
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಮ್ಮುಟ್ಟಿ ತಮ್ಮ ಸಂತಸವನ್ನು ಪ್ರೇಕ್ಷಕರು ಹಾಗೂ ತಮ್ಮ ಸಿನಿ ಪಯಣದಲ್ಲಿ ಜೊತೆಯಾದ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.
ನನ್ನನ್ನು ಬೆಂಬಲಿಸಿದವರಿಗೆಲ್ಲ ಧನ್ಯವಾದ
ಪ್ರಶಸ್ತಿ ಸ್ವೀಕರಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡ ಮಮ್ಮುಟ್ಟಿ, ಈ ಗೌರವ ತಮ್ಮ ಜೀವನದಲ್ಲಿ ಸದಾ ನೆನಪಿನಲ್ಲಿ ಉಳಿಯಲಿದೆ ಎಂದು ಹೇಳಿದ್ದಾರೆ. ತಮ್ಮ ಸಿನಿಮಾಗಳನ್ನು ವರ್ಷಗಳಿಂದ ವೀಕ್ಷಿಸಿದ, ಬೆಂಬಲಿಸಿದ, ಸಂಭ್ರಮಿಸಿದ ಹಾಗೂ ತಮ್ಮ ಅಭಿನಯದೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡ ಪ್ರೇಕ್ಷಕರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ತಮ್ಮ ಪಯಣದಲ್ಲಿ ಜೊತೆಯಾದ ಪ್ರತಿಯೊಬ್ಬರಿಗೂ ಈ ವಿಶೇಷ ಕ್ಷಣ ಸೇರಿದೆ ಎಂದು ಬರೆದುಕೊಂಡಿದ್ದಾರೆ.
ಚಿತ್ರರಂಗದ ಮೇಲಿನ ಪ್ರೀತಿಗೆ ಸಿಕ್ಕಿರುವ ಗೌರವ
ಮಮ್ಮುಟ್ಟಿಯ ನಿರ್ಮಾಣ ಸಂಸ್ಥೆಯೂ ನಟನ ಸಾಧನೆಯನ್ನು ವಿಶೇಷವಾಗಿ ಸಂಭ್ರಮಿಸಿದೆ. ನಾಲ್ಕನೇ ರಾಷ್ಟ್ರೀಯ ಪ್ರಶಸ್ತಿ ಅವರ ದೀರ್ಘ ಸಿನಿ ಪಯಣ ಮತ್ತು ಚಿತ್ರರಂಗದ ಮೇಲಿನ ನಿರಂತರ ಪ್ರೀತಿಗೆ ಸಿಕ್ಕಿರುವ ಗೌರವ ಎಂದು ಸಂಸ್ಥೆ ‘ಎಕ್ಸ್’ನಲ್ಲಿ ಹೇಳಿದೆ. ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳ ಜೊತೆಗೆ ಅಸಂಖ್ಯಾತ ಮರೆಯಲಾಗದ ಪಾತ್ರಗಳನ್ನು ನೀಡಿರುವ ಮಮ್ಮಟ್ಟಿಯ ಪಯಣವನ್ನು ಸಂಸ್ಥೆ ಕೊಂಡಾಡಿದೆ.
ರಾಹುಲ್ ಸದಾಶಿವನ್ ನಿರ್ದೇಶನದ ‘ಬ್ರಹ್ಮಯುಗಂ’ 2024ರಲ್ಲಿ ಬಿಡುಗಡೆಯಾದ ಹಾರರ್ ಸಿನಿಮಾ ಇದಾಗಿದೆ. 17ನೇ ಶತಮಾನದ ಮಲಬಾರ್ ಹಿನ್ನೆಲೆಯ ಕಥೆಯಲ್ಲಿ ನಿಗೂಢ ವ್ಯಕ್ತಿತ್ವದ ಕೊಡುಮೋನ್ ಪೊಟ್ಟಿಯಾಗಿ ಮಮ್ಮುಟ್ಟಿ ಕಾಣಿಸಿಕೊಂಡಿದ್ದರು. ಅವರ ಪಾತ್ರ, ಭಯ ಹುಟ್ಟಿಸುವ ವ್ಯಕ್ತಿತ್ವ ಮತ್ತು ಅಭಿನಯ ಚಿತ್ರಕ್ಕೆ ಪ್ರಮುಖ ಆಕರ್ಷಣೆಯಾಗಿತ್ತು.



