ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀವು ಹೋಟೆಲ್‌ಗಳಲ್ಲೋ ಅಥವಾ ಸೂಪರ್ ಮಾರ್ಕೆಟ್‌ಗಳಲ್ಲೋ ಕೊಳ್ಳುವ ಪನೀರ್ ನಿಜವಾಗಿಯೂ ಶುದ್ಧ ಹಾಲಿನಿಂದ ತಯಾರಾಗಿದೆಯೇ? ಇನ್ಮುಂದೆ ಈ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಏಕೆಂದರೆ, ಮಾರುಕಟ್ಟೆಯಲ್ಲಿ ಹಾಲಿನ ಅಂಶವೇ ಇಲ್ಲದೆ ಕೃತಕ ಪದಾರ್ಥಗಳನ್ನು ಬಳಸಿ ತಯಾರಾಗುವ ‘ಅನಲಾಗ್’ ಉತ್ಪನ್ನಗಳನ್ನು ‘ಪನೀರ್’ ಎಂಬ ಹೆಸರಿನಲ್ಲಿ ಮಾರಾಟ ಮಾಡುವುದನ್ನು ತಡೆಯಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹೊಸ ರೂಲ್ಸ್‌ವೊಂದನ್ನು ಜಾರಿಗೆ ತಂದಿದೆ.
ಗ್ರಾಹಕರನ್ನು ದಾರಿ ತಪ್ಪಿಸುವ ಇಂತಹ ನಕಲಿ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲು 2011ರ ಆಹಾರ ಸುರಕ್ಷತಾ ನಿಯಮಾವಳಿಗಳಿಗೆ ಹೊಸ ತಿದ್ದುಪಡಿಯನ್ನು ತರಲು ಇಲಾಖೆ ಪ್ರಸ್ತಾಪಿಸಿದೆ.
ಹೊಸ ನಿಯಮದ ಅಸಲಿ ಉದ್ದೇಶವೇನು?
‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ತಿದ್ದುಪಡಿ ನಿಯಮಾವಳಿಗಳು 2026’ ರ ಅಡಿಯಲ್ಲಿ, ಹಾಲಿನ ಹೊರತಾಗಿ ಇತರೆ ಯಾವುದೇ ಕಚ್ಚಾ ವಸ್ತುಗಳನ್ನು ಬಳಸಿ ಪನೀರ್ ತರಹದ ಉತ್ಪನ್ನಗಳನ್ನು ತಯಾರಿಸಿದರೆ, ಅದಕ್ಕೆ ಯಾವುದೇ ಕಾರಣಕ್ಕೂ ‘ಪನೀರ್’ ಎಂಬ ಹೆಸರನ್ನು ಲೇಬಲಿಂಗ್ ಅಥವಾ ಜಾಹೀರಾತುಗಳಲ್ಲಾಗಲಿ ಬಳಸುವಂತಿಲ್ಲ. ಈಗಾಗಲೇ ‘ಡೈರಿ ಅನಲಾಗ್’ ವಿಭಾಗದ ಅಡಿಯಲ್ಲಿ ಪರವಾನಗಿ ಪಡೆದಿರುವ ಕಂಪನಿಗಳು ಕೂಡ ತಮ್ಮ ಉತ್ಪನ್ನಗಳ ಮಾರ್ಕೆಟಿಂಗ್‌ನಲ್ಲಿ ಪನೀರ್ ಎಂಬ ಪದವನ್ನು ತಕ್ಷಣವೇ ಕೈಬಿಡಬೇಕಾಗುತ್ತದೆ. ಜನರು ತಾವು ತಿನ್ನುವ ಆಹಾರದ ಅಸಲಿ ಗುಣಮಟ್ಟವನ್ನು ಅರಿತು, ಸರಿಯಾದ ಆಯ್ಕೆ ಮಾಡಿಕೊಳ್ಳಲು ಈ ನಿಯಮ ನೆರವಾಗಲಿದೆ.
ಇದನ್ನೂ ಓದಿ:
ಸಾರ್ವಜನಿಕರ ಅಭಿಪ್ರಾಯಕ್ಕೆ 60 ದಿನಗಳ ಕಾಲಾವಕಾಶ
ಕೇಂದ್ರ ಸರ್ಕಾರದ ಒಪ್ಪಿಗೆಯೊಂದಿಗೆ ಬಿಡುಗಡೆ ಮಾಡಲಾಗಿರುವ ಈ ಹೊಸ ನಿಯಮವು ಸದ್ಯಕ್ಕೆ ಕರಡು ರೂಪದಲ್ಲಿದೆ. ಆದ್ದರಿಂದ ಈ ಕುರಿತು ಸಾರ್ವಜನಿಕರು, ಹೈನುಗಾರರು ಹಾಗೂ ಕಂಪನಿಗಳ ಮಾಲೀಕರಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ. ಈ ಅಧಿಸೂಚನೆ ಹೊರಬಿದ್ದ 60 ದಿನಗಳ ನಂತರ ಸಾರ್ವಜನಿಕರಿಂದ ಬಂದ ಸಲಹೆಗಳನ್ನು ಪರಿಶೀಲಿಸಿ, ಈ ಕಟ್ಟುನಿಟ್ಟಿನ ನಿಯಮವನ್ನು ಅಧಿಕೃತವಾಗಿ ಜಾರಿಗೆ ತರಲಾಗುವುದು ಎಂದು ಎಫ್‌ಎಸ್‌ಎಸ್‌ಎಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ. ಸಾರ್ವಜನಿಕರು ತಮ್ಮ ಸಲಹೆಗಳನ್ನು ನವದೆಹಲಿಯ ಕೋಟ್ಲಾ ರಸ್ತೆಯಲ್ಲಿರುವ ಇಲಾಖೆಯ ಕಚೇರಿಗೆ ಪತ್ರದ ಮೂಲಕ ಅಥವಾ ಇಮೇಲ್ ಮೂಲಕ ಸಲ್ಲಿಸಬಹುದಾಗಿದೆ.



